ಜಮೀನು ವಿವಾದ ಸಂಬಂಧ ಕನ್ನಡ ಚಿತ್ರರಂಗದ ನಟಿ ಅನುಗೌಡ ಮೇಲೆ ಅವರ ವಿರೋಧಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ನಟಿ ಸಾಗರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ಅನುಗೌಡ ಅವರ ಕುಟುಂಬಕ್ಕೆ ಸೇರಿದ ಜಮೀನು ಇದೆ. ಆ ಜಮೀನಿನ ವಿಚಾರವಾಗಿ ಅನುಗೌಡ ಮತ್ತು ಸ್ಥಳೀಯ ನಿವಾಸಿ ನೀಲಮ್ಮ, ಮೋಹನ್ ನಡುವೆ ವಿವಾದವಿದೆ ಎನ್ನಲಾಗಿದೆ. ಇದೇ ವಿವಾದ ಸಂಬಂಧ ಆ ಇಬ್ಬರೂ ಅನುಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನುಗೌಡ ತಮಿಳು ಹಾಗೂ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಜೊತೆಗೆ ಸ್ಕೂಲ್ ಮಾಸ್ಟರ್, ಶಿವರಾಜ್ ಕುಮಾರ್ ಅವರ ಸುಗ್ರೀವ, ಪುನಿತ್ ರಾಜ್ಕುಮಾರ್ ಅವರ ಹುಡುಗರು ಮತ್ತು ಸುದೀಪ್ ಜೊತೆ ಕೆಂಪೇಗೌಡ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ, ಸವಿಸವಿ ನೆನಪು, ದಂಡಂ ದಶಗುಣಂ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇನ್ನು, ತಮಿಳಿನ ಮೌನಮಾನ ನೇರಂ, ಕಲಕಲ್, ಶಂಕರ, ಆಡಾದ ಆಟಮೆಲ್ಲ ಸಿನಿಮಾಗಳಲ್ಲಿಯೂ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.