ಪ್ರಧಾನಮಂತ್ರಿ ಮೋದಿ ಮತ್ತು ಬಿಜೆಪಿ. ಮುಖಂಡರುಗಳು ಸದಾ ಜಾತಿ, ಧರ್ಮ, ಅಲ್ಪಸಂಖ್ಯಾತ ಧರ್ಮದ ವಿಷಯಗಳನ್ನು ಮುನ್ನೆಲೆಗೆ ತಂದು ಬಹುಸಂಖ್ಯಾತರ ಮತಗಳಿಸುವ ಮೂಲಕ ಅಧಿಕಾರ ಮತ್ತು ಹಣ ಮಾಡುವ ಕಲ್ಪನೆಯೊಂದಿಗೆ ದೇಶದಲ್ಲಿ ಶಾಂತಿ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ ಹೇಳಿದರು.
ಈ ಕುರಿತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯಾವಾಗಲೂ ಶ್ರೀಮಂತರ ಕಡೆಗೆ. ದೇಶದಲ್ಲಿ ಉದ್ಯಮಿಗಳ ಪರವಾದ ಆರ್ಥಿಕ ನಿಲುವುಗಳು, ಹಾಗೆಯೇ ಅವರು ಬಡವರ, ಬಡತನ, ನಿರ್ಗತಿಕರ ವಿರುದ್ಧವಾದ ಯೋಜನೆಗಳನ್ನು ತಿರಸ್ಕರಿಸಲು-ನಮ್ಮ ಹೋರಾಟ ಎಂದರು.
ಕೇಂದ್ರ ಸರ್ಕಾರದಿಂದ ಕರ್ನಾಟಕದ ರಾಜ್ಯ ಸರ್ಕಾರಕ್ಕೆ ಬರಬೇಕಾದ ಹಣ 1 ಲಕ್ಷ 87 ಸಾವಿರ ಕೋಟಿ ರೂಪಾಯಿಗಳನ್ನು ನೀಡದೆ, ಬಾಕಿ ಉಳಿಸಿಕೊಂಡಿದೆ. ಕರ್ನಾಟಕ ಸರ್ಕಾರ ಸದ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ಕೇಳಬೇಕಾದ ಪರಿಸ್ಥಿತಿ. ಕೇಂದ್ರದ ಮೇಲ್ಕಂಡ ಮಲತಾಯಿ ಧೋರಣೆ ನಡುವೆಯೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿಗಳನ್ನು ಅನುಷ್ಟಾನ ಮಾಡಿದೆ. ರಾಜ್ಯದ ಅಭಿವೃದ್ಧಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ ಎಂದರು.
2020ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ನೆರೆ ಹಾವಳಿಯಿಂದಾಗಿ 34 ಸಾವಿರ ಕೋಟಿ ರೂ. ನಷ್ಟ ಉಂಟಾಗಿತ್ತು. ಆಗ ರಾಜ್ಯದ ಜನ ಮನೆ, ಮಾರು, ಜಾನುವಾರು, ಆಸ್ತಿ ಪಾಸ್ತಿ ಕಳೆದುಕೊಂಡು ಬಹಳಷ್ಟು ನಷ್ಟ ಅನುಭವಿಸಿದ್ದರು. ಆಗಲೂ ಕೇಂದ್ರ ಸರ್ಕಾರ ಸ್ಪಂದಿಸಿರಲಿಲ್ಲ. ನಂತರ 2023-24ರಲ್ಲಿ ಬರಗಾಲ ಬಂದು ಜನ ಜಾನುವಾರು, ಪ್ರಾಣಿ ಪಕ್ಷಿಗಳು ಹನಿನೀರಿಗಾಗಿ ಪರದಾಡುತ್ತಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಜನರ ಕಷ್ಟ ನಷ್ಟಗಳನ್ನು ನೋಡಿ ಕೇಂದ್ರಸರ್ಕಾರ ಹಣ ನೀಡಿದರೆ ಬಿಜೆಪಿಗೆ ಮತವಾಗುವುದಿಲ್ಲವೆಂದು ಭಾವಿಸಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದರು.
2023-24 ಸೆಪ್ಟೆಂಬರ್‌ನಿಂದ ಬರಗಾಲ ಬಂದಿದೆ, ಕರ್ನಾಟಕ ಸರ್ಕಾರ ಬರಗಾಲದ ಅಂದಾಜು ವೆಚ್ಚದ ವರದಿ ನೀಡಿದೆ. ಅಂತೆಯೇ ಕೇಂದ್ರ ತಂಡವು ವರದಿ ನೀಡಿದೆ. ಕರ್ನಾಟಕದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಕೇಂದ್ರದ ಪ್ರಧಾನಮಂತ್ರಿಗಳು ಮತ್ತು ಗೃಹಮಂತ್ರಿಗಳನ್ನು ಭೇಟಿ ಮಾಡಿ ಆರ್ಥಿಕ ನೆರವು ಕೋರಿದರು. ಆದರೂ ಕೇಂದ್ರದ ರಾಜಕೀಯ ಮುಖಂಡರುಗಳಿಗೆ ನೆರೆಹಾವಳಿ ಮತ್ತು ಬರಗಾಲಕ್ಕಿಂತ, ತಾರತಮ್ಯ ನೀತಿ ಮತ್ತು ಕಲ್ಲು ಹೃದಯ ಕರಗಲಿಲ್ಲ. ಮೋದಿಯವರು ನೆರೆಹಾವಳಿಗೆ ಮತ್ತು ಬರದ ನಾಡಿಗೆ ಭೇಟಿ ನೀಡಲಿಲ್ಲ. ಆದರೆ, ಚುನಾವಣೆಗೆ ಬಂದಿದ್ದಾರೆ. ಕೇಂದ್ರ ಸರ್ಕಾರದ ಇಂತಹ ನಿಲುವುಗಳು, ಭಾರತದ ಒಕ್ಕೂಟ ವ್ಯವಸ್ಥೆಗೆ, ಏಕತೆಗೆ, ಸಮಗ್ರತೆಗೆ ಕಂಟಕವಾಗುವುದು, ಆರಂಭದಲ್ಲೇ ಇವುಗಳಿಗೆ ಕಡಿವಾಣ ಹಾಕಬೇಕು ಎಂದರು.
ಬಿಜೆಪಿ ಮತ್ತು ಎನ್.ಡಿ.ಎ ಬೆಂಬಲಿತ 27 ಜನ ನಮ್ಮ ಸಂಸದರು ಮೇಲ್ಕಂಡ ಸಮಸ್ಯೆಗಳಿಗೆ ಸಂಸತ್‌ನಲ್ಲಿ ಪ್ರಶ್ನೆ ಮಾಡದೆ, ರಾಜ್ಯಕ್ಕೆ ಆರ್ಥಿಕ ನೆರವು ಕೇಳಿಲ್ಲ. ಅದರಲ್ಲಿ ನಾಲ್ಕು ಜನ ಕರ್ನಾಟಕದ ಕೇಂದ್ರ ಸಚಿವರು ಸೇರಿದ್ದಾರೆ. ಇವರುಗಳು ಈಗ ಮತಯಾಚಿಸಲು ಜನರ ಮುಂದೆ ಬಂದಿದ್ದಾರೆ. ಈಗ ಕರ್ನಾಟಕದ ಮತದಾರರು ಬಿಜೆಪಿ ಮತ್ತು ಎನ್‌ಡಿಎಗೆ ಬೆಂಬಲಿಸುವ ಅಗತ್ಯವಿದೆಯ ಎಂದು ಪ್ರಶ್ನಿಸಿದರು.
ಭಾರತದಲ್ಲಿ ಅತೀ ಹೆಚ್ಚು ರೂ.4.3 ಲಕ್ಷ ಕೋಟಿ ಕೇಂದ್ರಕ್ಕೆ ತೆರಿಗೆ ಪಾವತಿಸುವ ಕರ್ನಾಟಕ ರಾಜ್ಯ ಸರ್ಕಾರ 2ನೇ ಸ್ಥಾನ ಹೊಂದಿದೆ. ಕರ್ನಾಟಕಕ್ಕೆ ಸಿಗುವ ಹಣ ಕೇವಲ ರೂ.45 ಸಾವಿರ ಕೋಟಿ. ಪ್ರತಿ ವರ್ಷ ಪ್ರತಿ ಕನ್ನಡಿಗ ಕೇಂದ್ರಕ್ಕೆ ಜಿ.ಎಸ್.ಟಿ. ರೂಪದಲ್ಲಿ ಪಾವತಿಸುತ್ತಿರುವ ಹಣ ರೂ.13,428, ಕೇಂದ್ರಕ್ಕೆ ನಾವು ರೂ.100 ತೆರಿಗೆ ಕೊಟ್ಟರೆ, ನಮಗೆ ಕೇಂದ್ರದಿಂದ ಹಿಂದಿರುಗಿಸಿ ಕೊಡುವುದು ರೂ.13.9ಪೈಸೆ. ಉತ್ತರಪ್ರದೇಶ ಸರ್ಕಾರ ಪಾವತಿಸುವ ತೆರಿಗೆ ಹಣ ರೂ.2 ಲಕ್ಷ ಕೋಟಿ. ಉತ್ತರಪ್ರದೇಶಕ್ಕೆ ಸಿಗುವ ಹಣ ರೂ.2ಲಕ್ಷ 18 ಸಾವಿರ ಕೋಟಿ, ಕೇಂದ್ರಕ್ಕೆ ಉತ್ತರಪ್ರದೇಶ ರೂ.100 ತೆರಿಗೆ ಕೊಟ್ಟರೆ, ಮರಳಿ ಉತ್ತರಪ್ರದೇಶ ಪಡೆಯುವುದು ರೂ.333.2ಪೈಸೆ ಎಂದರು.
ಕರ್ನಾಟಕ ರಾಜ್ಯದ ಕರಾವಳಿ ಭಾಗದ ಹಿರಿಯರು ಸ್ಥಾಪಿಸಿದ ಮೈಸೂರು ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್‌ಗಳು ಅಪಾರವಾಗಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿದ್ದರೂ, ಅಭಿವೃದ್ಧಿಗೆ ಸಹಕರಿಸಿದ್ದರೂ ಮೋದಿ ಸರ್ಕಾರ ಅವುಗಳನ್ನು ಒಂದೇ ದಿನದಲ್ಲಿ ಮಂಗಮಾಯ ಮಾಡಿತು (ಉಲ್ಲಾಳ-ಮಲ್ಪೆ-ಮರವಂತೆ ಬೀಚಿಗೆ ವಿಲೀನಗೊಂಡಂತಾಗಿದೆ) ಎಂಉ ಕಿಡಿಕಾರಿದರು.
ಮೋದಿ ಸರ್ಕಾರದ ಮೇಲ್ಕಂಡ ನಿಲುವಿನ ವಿರುದ್ಧ ವಿರೋಧಿಸುವ ಹಕ್ಕು ಪ್ರತಿಯೊಬ್ಬ ಮತದಾರನಿಗೂ ಇದೆ. ದಿನಾಂಕ : 26-04-2024 ಮತ್ತು 07-05-2024 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಾವುಗಳು ಹಸ್ತದ ಗುರುತಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ
