ರಾಜ್ಯದ ಬಡವರ ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ. ಆದ್ದರಿಂದ ಕ್ಷೇತ್ರದ ಹಿತ ಕಾಯಲು ಗೀತಕ್ಕಗೆ ಮತ ನೀಡಿ, ಆಶೀರ್ವದಿಸಿ ಎಂದು ಶಾಸಕ ಪ್ರದೀಪ್ ಈಶ್ವರ್ ಕೋರಿದರು.
ಶಿವಮೊಗ್ಗದ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ನಡೆದ ರೋಡ್ ಷೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
“ಕರ್ನಾಟಕದ ಚರಿತ್ರೆಯ ಮೊದಲ ಪುಟ ಶಿವಮೊಗ್ಗ ಜಿಲ್ಲೆಯಿಂದ ಆರಂಭವಾಗುತ್ತದೆ. ಇಲ್ಲಿ ಜನಸಾಮಾನ್ಯರಿಗೆ ಸೇವೆ ಒದಗಿಸಲು ಗೀತಕ್ಕ ಉತ್ತಮ ನಾಯಕಿ. ಆದ್ದರಿಂದ ಈ ಬಾರಿ ಗೀತಕ್ಕಗೆ ಮತ ನೀಡಿ ಆಶೀರ್ವದಿಸಿ” ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, “ಸಮಾಜದಲ್ಲಿ ಬಡತನ, ಹಸಿವು, ಅಸಮಾನತೆಯ ಪಿಡುಗು ನಿವಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ದುಡಿಯುತ್ತಿದೆ. ಅದೇ ಉದ್ದೇಶಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ” ಎಂದರು.
“ಕಾಂಗ್ರೆಸ್ ಸರ್ಕಾರದ ಮೂಲ ಉದ್ದೇಶ ಶೋಷಿತ ವರ್ಗದವರನ್ನು ಮುಖ್ಯ ವಾಹಿನಿಗೆ ಕರೆತರುವುದು. ಅದು ಖಂಡಿತ ನೆರವೇರಲಿದೆ. ಅದೇ ರೀತಿ, ಗ್ಯಾರಂಟಿಗಳು ಬಡವರ ಮನೆ ಬಾಗಿಲಿಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ತಲುಪುತ್ತಿವೆ. ಇದಕ್ಕೆ ನ್ಯಾಯ ಒದಗಿಸಲು ಎಲ್ಲರೂ ಕೈ ಜೋಡಿಸಬೇಕು. ಆದ್ದರಿಂದ, ಈ ಬಾರಿ ಮತ ನೀಡಿ ಆಶೀರ್ವದಿಸಿ” ಎಂದು ಕೋರಿದರು.
ನಟ ದುನಿಯಾ ವಿಜಯ್ ಮಾತನಾಡಿ, “ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರು ನೀಡಿದ ಕೊಡುಗೆ ಜನ ಮಾನಸದಲ್ಲಿ ಉಳಿದಿವೆ. ಅದೇ ರೀತಿ, ಗೀತಕ್ಕ ಕೂಡ ಜನಪರ ಆಡಳಿತ ನಡೆಸಿ, ಎಲ್ಲರೂ ಮೆಚ್ಚುವಂತಹ ನಾಯಕಿಯಾಗಿ ಹೊರಹೊಮ್ಮಲಿದ್ದಾರೆ. ಆದ್ದರಿಂದ, ಈ ಭಾರಿ ಒಂದು ಅವಕಾಶ ಕಲ್ಪಿಸಿಕೊಡಿ” ಎಂದರು.
ತರೀಕೆರೆ ಶಾಸಕ ಶ್ರೀನಿವಾಸ್ ಮಾತನಾಡಿ, “ಜಿಲ್ಲೆಯ ಅಭಿವೃದ್ಧಿಗೆ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಿ ಆಶೀರ್ವದಿಸಿ” ಎಂದು ಕೋರಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, “ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಮತದಾನ ಪ್ರಕ್ರಿಯೆ ಇದೇ ಮೇ 7ರಂದು ನಡೆಯಲಿದೆ. ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ನಿಮ್ಮ ಮನೆ ಮಗಳಾದ, ಗೀತಾ ಶಿವರಾಜ್‌ಕುಮಾರ್ ಸ್ಪರ್ಧಿಸಿದ್ದೇನೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ಜಾತಿ-ಧರ್ಮದವರ ಜೀವನ ಕ್ರಮವನ್ನು ಸುಧಾರಿಸಲು ಐದು ಜನಪರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದ್ದರಿಂದ, ಸರ್ಕಾರದ ಈ ಋಣ ತೀರಿಸುವ ಹೊಣೆ ಎಲ್ಲರದ್ದಾಗಿದೆ. ಆದ್ದರಿಂದ, ವಿಪಕ್ಷಗಳು ಒಡ್ಡುವ ಹಣ-ಹೆಂಡದಂತಹ ಆಮಿಷಗಳಿಗೆ ಒಳಗಾಗದೆ, ಪೊಳ್ಳು ಭರವಸೆಗಳಿಗೆ ಮರುಳಾಗದೆ, ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ, ನನಗೆ ಮತ ನೀಡಿ ಆಶೀರ್ವದಿಸಿ” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಿಜೆಪಿ ಸುಳ್ಳುಗಳು ಇನ್ನು ನಡೆಯುವುದಿಲ್ಲ: ಲಕ್ಷ್ಮಣ ಸವದಿ ವಾಗ್ದಾಳಿ
ನಟ ಶಿವರಾಜ್‌ಕುಮಾರ್, ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್ ಪ್ರಸನ್ನಕುಮಾರ್, ಸೂಡ ಅಧ್ಯಕ್ಷ ಎಚ್ ಎಸ್ ಸುಂದರೇಶ್, ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವಿಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಎನ್ ರಮೇಶ್, ಮರಿಯಪ್ಪ, ಎಚ್ ಸಿ ಯೋಗೀಶ್, ರೇಖಾ ರಂಗನಾಥ, ಎಚ್ ಪಿ ಗಿರೀಶ್, ಶರತ್ ಮರಿಯಪ್ಪ ಸೇರಿದಂತೆ ಬಹುತೇಕ ಕಾರ್ಯಕರ್ತರು ಇದ್ದರು.
