ಮೈಮೇಲೆ ಬಿಸಿ ಚಹಾ ಬಿದ್ದು ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ನಗರ ಸಮೀಪದ ಹಿರಿಮನೆ ಎಂಬಲ್ಲಿ ಈ ಘಟನೆ ನಡೆದಿದ್ದು, ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿದ್ದ ಮಗು ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದೆ. ಮೃತಪಟ್ಟ ಮಗುವನ್ನು 2 ವರ್ಷದ ಬಾಲಕ ಅಥರ್ವ ಎಂದು ಗುರುತಿಸಲಾಗಿದೆ.
ಶಾಸಕ ಆರಗ ಜ್ಞಾನೇಂದ್ರ ಅವರ ಹೊಸನಗರ ಭಾಗದ ಆಪ್ತ ಸಹಾಯಕ ರಾಜೇಶ್ ಹಿರಿಮನೆ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಅಶ್ವಿನಿ ಪಾಟೀಲ್ ಅವರ 2 ವರ್ಷದ ಪುತ್ರ ಅಥರ್ವ ಅ. 24ರಂದು ಆಟವಾಡುತ್ತಿದ್ದ ವೇಳೆ ಮೈಮೇಲೆ ಬಿಸಿ ಟೀ ಬೀಳಿಸಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ. ಮಗುವಿಗೆ ಮೊದಲು ಸ್ಥಳೀಯ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ, ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎಂಟು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮಗು ಮೃತಪಟ್ಟಿದೆ.
ಇದನ್ನು ಓದಿದ್ದೀರಾ? ಸಾಹಿತ್ಯ ಸಮ್ಮೇಳನ | ಈ ಬಾರಿ ಅಲ್ಪಸಂಖ್ಯಾತ ಸಾಹಿತಿ ಅಧ್ಯಕ್ಷರಾಗಲಿ
ರಾಜೇಶ್ ಅವರ ನೆರೆಮನೆಯ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅಂದು ರಾತ್ರಿ ಅಂತಿಮ ದರ್ಶನಕ್ಕೆ ಬಂದಿದ್ದ ಜನರಿಗೆಂದು ರಾಜೇಶ್ ಮತ್ತವರ ಪತ್ನಿ ದೊಡ್ಡ ಪಾತ್ರೆಯಲ್ಲಿ ಟೀ ಮಾಡಿ ತಮ್ಮ ಮನೆಯ ಜಗಲಿ ಮೇಲಿಟ್ಟಿದ್ದರು. ಆಟವಾಡುತ್ತಾ ಅಲ್ಲಿಗೆ ಬಂದಿದ್ದ ಬಾಲಕ ಅಥರ್ವ, ಪಾತ್ರೆಯನ್ನು ಎಳೆದಿದ್ದಾನೆ. ತುಂಬಾ ಬಿಸಿ ಇದ್ದ ಟೀ ಮೈಮೇಲೆ ಚೆಲ್ಲಿ ಗಾಯಗೊಂಡಿದ್ದ.
ರಾಜೇಶ್, ಅಶ್ವಿನಿ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದ್ದು ಇದೀಗ ಪುತ್ರನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಹಿರಿಮನೆ ಗ್ರಾಮದಲ್ಲಿ ಮೌನ ಆವರಿಸಿದೆ.
