ಸಿಐಟಿಯು ನೇತೃತ್ವದ ಅಕ್ಷರದಾಸೋಹ ನೌಕರರ ಸಂಘದ ಸಂಘಟಿತ ಹೋರಾಟಕ್ಕೆ ಮಣಿದು ಸರ್ಕಾರವು ಅಕ್ಷರ ದಾಸೋಹ ನೌಕರರಿಗೆ ಇಡಿಗಂಟು ಜಾರಿಗೊಳಿಸುವುದಾಗಿ ಆದೇಶ ಹೊರಡಿಸಿರುವುದು ಐತಿಹಾಸಿಕ ಜಯ ಎಂದು ಸಿಐಟಿಯು ಶಿವಮೊಗ್ಗ ಜಿಲ್ಲಾ ಘಟಕದ ಮುಖಂಡರು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಮಾತನಾಡಿದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಸಂಘ(ಸಿಐಟಿಯು)ದ ಶಿವಮೊಗ್ಗ ಜಿಲ್ಲಾ ಬಿಸಿಯೂಟ ಸಂಘದ ಅಧ್ಯಕ್ಷೆ ಹನುಮಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸಿದರು.
“ಮಧ್ಯಾಹ್ನದ ಬಿಸಿಯೂಟ ಯೋಜನೆಯು ನಮ್ಮ ರಾಜ್ಯದಲ್ಲಿ 2001-02 ರಲ್ಲಿ ಪ್ರಾರಂಭವಾಯಿತು. ಯೋಜನೆ ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಮಕ್ಕಳ ಗೈರು ಹಾಜರಾತಿ ತಡೆಗಟ್ಟಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಅಡುಗೆ ನೌಕರರನ್ನು ನಿವೃತ್ತಿ ಹೆಸರಿನಲ್ಲಿ ರಾಜ್ಯದಲ್ಲಿ ಕಳೆದ 2022 ರಿಂದ ಸುಮಾರು 11,500 ಕ್ಕೂ ಹೆಚ್ಚಿನ ನೌಕರರನ್ನು ಕೆಲಸದಿಂದ ಕೈ ಬಿಡಲಾಗಿದೆ. ಕಳೆದ 23 ವರ್ಷಗಳಿಂದಲೂ ಸೇವೆ ಸಲ್ಲಿಸಿದ ಈ ನೌಕರರ ಅಮಾನೀಯವಾಗಿ ಬಿಡುಗಡೆ ಮಾಡಿದ ಕ್ರಮ ಖಂಡಿಸಿ ನಿರಂತರ ಹೋರಾಟ ನಡೆಸುತ್ತಲೇ ಬಂದಿದೆ” ಎಂದರು.
ಕಳೆದ 3-4 ವರ್ಷಗಳಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಮತ್ತು ನಿವೃತ್ತ ಅಡುಗೆಯವರಿಗೆ ಒಂದು ಲಕ್ಷ ರೂಪಾಯಿಗಳ ಇಡಿಗಂಟು ನೀಡಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಹಲವಾರು ಬಾರಿ ಹೋರಾಟ ನಡೆಸಿದಾಗ ಮಾತುಕತೆ ಕೂಡ ನಡೆಸಿದ್ದರು. ಇದರ ಬಗ್ಗೆ ಸರ್ಕಾರವಾಗಲಿ, ಶಿಕ್ಷಣ ಇಲಾಖೆಯಾಗಲಿ ಹೆಚ್ಚಿನ ಮುತುವರ್ಜಿ ವಹಿಸಿರಲಿಲ್ಲ ಎಂದು ತಿಳಿಸಿದರು.
ಕಳೆದ ಜುಲೈ 15ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಇಡಿಗಂಟು ಜಾರಿ ಸೇರಿದಂತೆ ಇನ್ನಿತರ ಬೇಡಿಕೆಗಳಿಗಾಗಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ನಮ್ಮ ಈ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರವು 60 ವರ್ಷ ಪೂರ್ಣಗೊಂಡ ನಂತರ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ನೌಕರರಿಗೆ ರೂ. 40,000 ಮತ್ತು 5 ವರ್ಷ ಮೇಲ್ಪಟ್ಟು ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಂಡ ನಂತರ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ನೌಕರರಿಗೆ ರೂ.30,000 ಇಡಿಗಂಟು ನೀಡಲು ಒಪ್ಪಿಗೆ ನೀಡಿದೆ. ಇದು ಸಂಘಟಿತ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ” ಎಂದು ಹನುಮಮ್ಮ ತಿಳಿಸಿದರು.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ”ಎಕನಾಮಿಕ್ ಸರ್ವೇ”: ಗಾಳಿ ಬಂದತ್ತ ತೂರಿಕೊಳ್ಳುವ ಪ್ಲಾನ್ ಇರಬಹುದೇ?
ಅನಿರ್ದಿಷ್ಟಾವಧಿ ಹೋರಾಟದ ವೇಳೆ ರಾಜ್ಯಾದ್ಯಂತ ಸುಮಾರು ಐದುಸಾವಿರಕ್ಕೂ ಹೆಚ್ಚು ಅಡುಗೆ ಸಿಬ್ಬಂದಿಗಳು ಅಡುಗೆ ಬಂದ್ ಮಾಡಿ ಭಾಗವಹಿಸಿದ್ದರು. ಹೋರಾಟದ ನೇತೃತ್ವವನ್ನು ರಾಜ್ಯ ಗೌರವಾಧ್ಯಕ್ಷರಾದ ಎಸ್. ವರಲಕ್ಷ್ಮಿ, ಅಧ್ಯಕ್ಷರಾದ ಲಕ್ಷ್ಮಿದೇವಿ, ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಖಜಾಂಚಿ ಮಹಾದೇವಮ್ಮ ಸಿದ್ದಮ್ಮ, ಗಂಗಾ ನಾಯ್ಕ ಮಹೇಶ ಹಿರೇಮಠ, ಅರವಿಂದ, ಇನ್ನಿತರು ವಹಿಸಿದ್ದರು.
