ಗ್ರಾಮೀಣ ಭಾಗದಲ್ಲಿ ಕಾಲೇಜು ನಡೆಯುತ್ತಿರುವುದೇ ನಮ್ಮ ಹೆಮ್ಮೆ. ಆದರೆ ಕಾಲೇಜಿನಲ್ಲಿ ಅನೇಕ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಕಾಲೇಜು ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಯಡೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಬರ್ಟ್ ಡಿಕಾಸ್ಟ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಜ್ಞಾನ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ವೇದಿಕೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
“ವಿದ್ಯಾರ್ಥಿ ಜೀವನ ಸಿಗುವುದು ಒಮ್ಮೆ ಮಾತ್ರ. ಅದನ್ನು ಎಂದಿಗೂ ದುರುಪಯೋಗಪಡಿಸಿಕೊಳ್ಳಬೇಡಿ” ಎಂದು ರಾಬರ್ಟ್ ಡಿಕಾಸ್ಟ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿ ಅಬ್ದುಲ್ ನಜೀರುಲ್ಲಾ ಖಾನ್ ಮಾತನಾಡಿ, “ವಿದ್ಯಾರ್ಥಿಗಳು ಮುಖ್ಯವಾಗಿ ಓದುವ ಸಮಯವನ್ನು ವ್ಯರ್ಥ ಮಾಡಬೇಡಿ. ನಿಮ್ಮ ತಂದೆ ತಾಯಿಗಳು ನಿಮ್ಮ ಮೇಲೆ ಅನೇಕ ಕನಸುಗಳನ್ನಿಟ್ಟು ಓದಿಸಿದ್ದಾರೆ. ಮುಂದೊಂದು ದಿನ ನೀವೆಲ್ಲರೂ ಉನ್ನತ ಹುದ್ದೆಗೆ ಏರಿ ಅವರ ಕನಸುಗಳನ್ನು ಈಡೇರಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೇಂದ್ರ, ರಾಜ್ಯ ಸರ್ಕಾರಗಳು ಅಡಕೆ ಬೆಳಗಾರರ ಹಿತ ಕಾಪಾಡುವಲ್ಲಿ ವಿಫಲ: ತಿ ನಾ ಶ್ರೀನಿವಾಸ್
ಕನ್ನಡ ಉಪನ್ಯಾಸಕ ಡಾ. ಗಣೇಶ್ ಕೆಂಚನಾಲ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಆರ್ ಸುರೇಶ್, ಉಪನ್ಯಾಸಕಿ ಬೇಬಿ ಮತ್ತು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಿರೀಶ್ ಹಾಗೂ ಅಭಿಷೇಕ್ ಸೇರಿದಂತೆ ಇತರರು ಇದ್ದರು.
ವರದಿ : ಅಮಿತ್ ಆರ್, ಆನಂದಪುರ