ಸಂವಿಧಾನವನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಹೊಣೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ ಎಚ್. ರಾಚಪ್ಪ ಅಭಿಪ್ರಾಯಪಟ್ಟರು.
ದಿ. 01-01-2025 ರಂದು ಶಿವಮೊಗ್ಗದ ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಿದ್ದ ʼಭೀಮ ಕೋರೆಗಾಂವ್ ವಿಜಯದ ದಿನʼ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಅವರು, ʼಭಾರತೀಯರ ಸ್ವಾಭಿಮಾನವೇ ಸಂವಿಧಾನವಾಗಿ ರೂಪುಗೊಂಡಿದೆ. ನಮ್ಮ ಎಲ್ಲಾ ಹೋರಾಟದ ಹಿರಿಯ ಸಮಾಜ ಸುಧಾರಕರ ಹೋರಾಟದ ಪ್ರತಿಫಲವಾಗಿ ಬೃಹತ್ ಸಂವಿಧಾನವನ್ನು ಪಡೆದಿದ್ದೇವೆ. ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.

“ದೇಶದ ಇತಿಹಾಸದಲ್ಲೇ ಶೂದ್ರ ಸಮುದಾಯವನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡಿದ್ದ ಪೇಶ್ವೆಗಳ ಆಡಳಿತವನ್ನು ಖಂಡಿಸಿ ಕೋರೆಗಾಂವ್ ನಲ್ಲಿ ಮಹರ್ ರೆಜಿಮೆಂಟಿನ ನಾಯಕ ಸಿದ್ದನಾಯಕರ ನೇತೃತ್ವದಲ್ಲಿ ಯುದ್ಧ ಮಾಡಲಾಯಿತು. ಭಾರತದ ಮೂಲನಿವಾಸಿಗಳ, ಶೋಷಿತ ಸಮುದಾಯಗಳ ವಿಮೋಚನೆಗಾಗಿ, ಅವರ ಸ್ವಾಭಿಮಾನಕ್ಕಾಗಿ 29 ಸಾವಿರ ಪೇಶ್ವೆ ಸೈನಿಕರ ವಿರುದ್ಧ ಹೋರಾಡಿ ಹುತಾತ್ಮರಾದ ರೆಜಿಮೆಂಟಿನ 28 ಮಹಾ ಸೈನಿಕರ ನೆನಪಿಗಾಗಿ 65 ಅಡಿ ಸ್ಮಾರಕವನ್ನು ಕೋರೆಗಾಂವ್ ನಲ್ಲಿ ನಿರ್ಮಿಸಲಾಗಿದೆ. ಅವರ ತ್ಯಾಗ ಬಲಿದಾನವನ್ನು ಸ್ಮರಿಸುವ ಸಲುವಾಗಿ ʼಭೀಮ ಕೋರೆಗಾಂವ್ ವಿಜಯದ ದಿನʼವನ್ನು ಆಚರಿಸಲಾಗುತ್ತದೆ. ಅವರು ತಂದುಕೊಟ್ಟ ಸ್ವಾಭಿಮಾನದ ಮೊದಲ ಸ್ವಾತಂತ್ರ್ಯ ಹಾಗೂ ಸಮಾನತೆಯ ಪ್ರತೀಕವಾದ ಸಂವಿಧಾನ ಸದ್ಯ ಅಪಾಯದಲ್ಲಿದೆ. ನಾವೆಲ್ಲರೂ ಇದರ ರಕ್ಷಣೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸರ್ಕಾರಿ ಶಾಲೆ ಶಿಕ್ಷಕಿ ನಿವೃತ್ತಿ; ಅಂಬೇಡ್ಕರ್ ಫೋಟೋ ನೀಡಿ, ಹಳೆ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ಕಾರ್ಯಕ್ರಮದಲ್ಲಿ ಡಿಎಸ್ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಹಾಲೇಶಪ್ಪ, ವಕೀಲ ಎಸ್.ಎಚ್.ಧನಂಜಯ್, ಎ.ಡಿ.ಆನಂದಪ್ಪ, ಎಂ.ಮಂಜುನಾಥ, ಸಂತೆಕಡೂರು ಪರಮೇಶ್, ಹುಣಸೋಡು ಶೇಷಪ್ಪ, ಸೂಗೂರು ಪರಮೇಶ್, ಶ್ರೀಮತಿ ಲತಾ ಹರೀಶ್ ಹಾಗೂ ಕಲ್ಲಿಹಾಳ್ ಹನುಮಂತಪ್ಪ ಉಪಸ್ಥಿತರಿದ್ದರು.
