ಶಿವಮೊಗ್ಗ ನಗರದಲ್ಲಿ ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆ ಮಾಡುವಂತೆ ಆಗ್ರಹಿಸಿ ಗೋನ್ ಸೋಷಿಯಲ್ ಸರ್ವೀಸ್ ಅಸೋಸಿಯೇಷನ್ ಸಂರಕ್ಷಕ ಎನ್ ಎಂ ಸಿಗ್ಬತ್‌ಉಲ್ಲಾ ನೇತೃತ್ವದಲ್ಲಿ ಸಭಾಪತಿ ಯು ಟಿ ಖಾದರ್ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ ಕಾರ್ಯಕರ್ತರು, “ಶಿವಮೊಗ್ಗ ನಗರವು ಉನ್ನತ ಶಿಕ್ಷಣಕ್ಕೆ ಬೇಕಾದ ಎಲ್ಲ ರೀತಿಯ ಸೌಲಭ್ಯ ಹಾಗೂ ಅನುಕೂಲತೆಗಳನ್ನು ಹೊಂದಿದ್ದು, ಎರಡು ವೈದ್ಯಕೀಯ ಕಾಲೇಜುಗಳಿವೆ. ಇದರಲ್ಲಿ ಖಾಸಗಿ ಹಾಗೂ ಸರ್ಕಾರಿ ಕಾಲೇಜು ಸ್ವಾಮ್ಯದಲ್ಲಿವೆ. ಪ್ಯಾರಾ ಮೆಡಿಕಲ್ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜುಗಳು, ಬಿಎಎಂಎಸ್ ಕಾಲೇಜು ಸೇರಿದಂತೆ ಪದವಿ ಕಾಲೇಜುಗಳೂ ಇವೆ” ಎಂದು ಹೇಳಿದರು.
“ಸದರಿ ಕಾಲೇಜುಗಳ ದಾಖಲಾತಿಗೆ ಅಕ್ಕ-ಪಕ್ಕದ ಜಿಲ್ಲೆಗಳಿಂದ ಅನೇಕ ಮಕ್ಕಳು ವ್ಯಾಸಾಂಗಕ್ಕಾಗಿ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದಾರೆ. ಹಾಗೆಯೇ ಉನ್ನತ ಶಿಕ್ಷಣಕ್ಕಾಗಿ ಬಯಸಿ ಶಿವಮೊಗ್ಗ ಜಿಲ್ಲೆಗೆ ಬರುವ ಸಂಖ್ಯೆ ಅಧಿಕವಾಗಿದೆ. ಅಲ್ಲದೆ ಕಾನೂನು ಶಿಕ್ಷಣಕ್ಕಾಗಿ ಅನ್ಯ ಜಿಲ್ಲೆಗಳಿಗೆ ಇಲ್ಲಿನ ಮಕ್ಕಳು ವಲಸೆ ಹೋಗುತ್ತಿರುವುದು ಕಂಡುಬಂದಿದೆ. ಜತೆಗೆ ಕಾನೂನು ಪದವಿ ಪಡೆಯಲು ಬಡ ವಿದ್ಯಾವಂತ ಮಕ್ಕಳಿಗೆ ಆಸಕ್ತಿಯಿದ್ದರೂ ಕೂಡಾ ಖಾಸಗಿ ಕಾನೂನು ಕಾಲೇಜಿಗೆ ದಾಖಲಾತಿ ಹೊಂದಲಾಗದೆ ಅನಿವಾರ್ಯವಾಗಿ ಅನ್ಯ ವಿಷಯಗಳನ್ನು ಪಡೆದು ವ್ಯಾಸಾಂಗದಲ್ಲಿ ಮುಂದುವರೆಯುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಬಲವರ್ಧನೆಗೆ ಸದಸ್ಯರ ಸಹಕಾರ ಅಗತ್ಯ: ಡಿ ಜಿ ನಾಗರಾಜ್
“ಶಿವಮೊಗ್ಗ ಜಿಲ್ಲೆ ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಗಳ ಬಡ ಪ್ರತಿಭಾನ್ವಿತ ಮಕ್ಕಳಿಗೆ ಅನುಕೂಲವಾಗುವಂತೆ ಹಾಗೂ ಅವರು ಕಂಡ ಕನಸು ನನಸುಗೊಳಿಸಿಕೊಳ್ಳಲು ನಗರದಲ್ಲಿ ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆಗೆ ಅನುಮತಿ ಹಾಗೂ ಅನುದಾನ ನೀಡಬೇಕು” ಎಂದು ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ದೇವರಾಜ್, ಲೀಗಲ್ ಅಡ್ವಕೇಟ್ ಸುಹಾಸ್, ಲೋಕೇಶ್, ಪುರುಖಾನ್, ಜಿಶಾನ್, ಅಸ್ಲಾಂ, ಅಪ್ಪಿ, ನಾಸಿರ್
ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಇದ್ದರು.