ದಲಿತರ ಮೇಲಿನ ದೌರ್ಜನ್ಯ ತಡೆಯಲು ಜಿಲ್ಲಾಮಟ್ಟದಲ್ಲಿ ವಿಶೇಷ ಪೊಲೀಸ್ ಠಾಣೆ ತೆರೆಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಇತ್ತೀಚೆಗೆ ದಲಿತರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರಕರಣದ ದಾಖಲೆಗಳು ಕೂಡ ತನಿಖೆಗಳು ಕೂಡ ಮಂದಗತಿಯಲ್ಲಿ ನಡೆಯುತ್ತಿದೆ. ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಸಿಗುವುದು ದುರ್ಲಬವಾಗುತ್ತಿದೆ. ಇದನ್ನು ತಡೆಯಲು ಅನುಕೂಲವಾಗುವಂತೆ ಜಿಲ್ಲೆಗೊಂದು ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಲ್ಲದೇ ಎಸ್ಸಿ., ಎಸ್ಪಿ., ಟಿ.ಎಸ್ಪಿ., ಯೋಜನೆಯ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇದು ಶೋಷಿತ ಸಮುದಾಯಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಕೂಡಲೇ ಇದನ್ನು ತಡೆಯಬೇಕು. ಇದಕ್ಕಾಗಿ ಇರುವ ಸೆಕ್ಷನ್ 7ನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿ ಜಾರಿಗೆ ಒತ್ತಾಯ: ಮಾದಿಗ-ಛಲವಾದಿ ಸಮುದಾಯಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ
ಒಳಮೀಸಲಾತಿ ತಕ್ಷಣ ಜಾರಿಯಾಗಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ಬರಬೇಕು. ಕಾಂತರಾಜ್ ವರದಿ ಜಾರಿಗೊಳಿಸಬೇಕು, ಜನಗಣತಿ ಸಂಖ್ಯೆಯನ್ನು ಬಹಿರಂಗಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್.ಹಾಲೇಶಪ್ಪ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಮಾಚೇನಹಳ್ಳಿ ರುದ್ರಮ್ಮ, ಪ್ರಮುಖರಾದ ಎಂ.ಮಂಜುನಾಥ್, ಎಂ.ಆರ್.ಶಿವಕುಮಾರ್, ಗೋವಿಂದ, ಶೇಷಪ್ಪ, ಆನಂದ್, ಜಗ್ಗು, ರಂಗಸ್ವಾಮಿ, ಸೂಗೂರು ಪರಮೇಶ್, ಲತಾ ಬಿದ್ರೆ ಸೇರಿದಂತೆ ಹಲವರಿದ್ದರು.

