ಭಾರತದ ಮುಸ್ಲಿಂ ಧಾರ್ಮಿಕ ಗುರುಗಳಾದ ಮುಪ್ತಿ ಸಲ್ಮಾನ್ ಅಜ್ಜರಿ ರವರು ತಮ್ಮ ವಿಚಾರವನ್ನು ಗಝಲಿನ ರೂಪದಲ್ಲಿ ಮಂಡಿಸಿದಾಗ ಅದರಲ್ಲಿ ಧರ್ಮವನ್ನು ದ್ವೇಷಿಸುವ ಅಂಶಗಳು ಇರುತ್ತವೆಂದು ಅವರನ್ನು ಬಂಧಿಸಿದ್ದು, ಸುಳ್ಳು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿರುವುದು ಖಂಡನೀಯ ಎಂದು ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ವತಿಯಿಂದ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದ ಗಾಂಧಿ ಬಜಾರ್‌ನ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಮುಖಂಡ ಮೌಲಾನ ಶಾಹುಲ್ ಹಮಿದ್ ನೇತೃತ್ವದಲ್ಲಿ ಮುಸ್ಲಿಂ ಧಾರ್ಮಿಕ ಗುರುಗಳಾದ ಮುಪ್ತಿ ಸಲ್ಮಾನ್ ಅಜ್ಜರಿ ಹಾಗೂ ಹಜರತ್ ಖಮರ್ ಉಸ್ಮಾನಿ ಅವರ ಪ್ರಕರಣಗಳನ್ನು ಹಿಂಪಡೆಯುವಂತೆ ಹಾಗೂ ಜ್ಞಾನವ್ಯಾಪಿ ಮಸೀದಿಯಂತಹ ವಿಷಯಗಳನ್ನು ಮುನ್ನಲೆಗೆ ತರದಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಗುಜರಾತ್ ಸರ್ಕಾರಕ್ಕೆ ಮೆಮೊರಂಡಮ್ ಅರ್ಜಿ ಸಲ್ಲಿಸಿದರು.
ಮೌಲಾನ ಶಾಹುಲ್ ಹಮಿದ್ ಮಾತನಾಡಿ, “ಗಝಲಿನ ರೂಪದಲ್ಲಿ ಮಂಡಿಸಿರುವ ವಿಚರಗಳಲ್ಲಿ ಯಾವುದೇ ಧರ್ಮಗಳನ್ನು ದ್ವೇಷಿಸುವ ಅಂಶಗಳು ಇರುವುದಿಲ್ಲ. ಹಾಗೂ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿರುವುದರಲ್ಲಿ ಯಾವುದೇ ಸತ್ಯಾಂಶಗಳು ಇರುವುದಿಲ್ಲ. ಇವರು ಮಂಡಿಸಿರುವ ವಿಚಾರವು ಸಂವಿಧಾನದ ಅನುಚ್ಛೇದ 19ರ ಅಡಿಯಲ್ಲಿ ಎಲ್ಲರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವ ಅಡಿಯಲ್ಲಿಯೇ ಇರುತ್ತದೆ. ಇವರ ಮೇಲಿರುವ ಪ್ರಕರಣವನ್ನು ವಾಪಾಸ್ ಪಡೆಯಬೇಕು” ಎಂದು ಮೆಮೊರಂಡಮ್ ಮೂಲಕ ಗುಜರಾತ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
“ಇದೇ ರೀತಿ ಇನ್ನೋರ್ವ ಮುಸ್ಲಿಂ ಧಾರ್ಮಿಕ ಗುರು ಹಜರತ್ ಖಮರ್ ಉಸ್ಮಾನಿ ಅವರನ್ನೂ ಕೂಡ ಇಂತಹದ್ದೇ ಪ್ರಕರಣದಲ್ಲಿ 7 ತಿಂಗಳ ಹಿಂದೆ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದೂ ಕೂಡಾ ಖಂಡನೀಯವಾಗಿದ್ದು, ಅವರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂಪಡೆಯಬೇಕು” ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
“ಮುಸ್ಲಿಂ ಜನಾಂಗದವರಿಗೆ ಬೇರೆಯವರ ಸ್ಥಳ ಅಥವಾ ಜಾಗದಲ್ಲಿ ಮಸೀದಿಗಳನ್ನು ಕಟ್ಟಲು ಅವಕಾಶವಿರುವುದಿಲ್ಲ. ಇಂತಹ ಕೃತ್ಯಗಳಿಗೆ ಇಸ್ಲಾಂ ಧರ್ಮವು ಅವಕಾಶ ನೀಡುವುದಿಲ್ಲ. ಆದರೂ ಕೋಮುವಾದಿ ಶಕ್ತಿಗಳು ಬಹು ಸಂಖ್ಯಾತರ ಮತಗಳ ದೃವೀಕರಣಕ್ಕೆ ಬಾಬರಿ ಮಸೀದಿಯ ಧ್ವಂಸದ
ನಂತರ ಜ್ಞಾನವ್ಯಾಪಿ ಮಸೀದಿಯ ಪ್ರಕರಣವನ್ನು ಮುನ್ನಲೆಗೆ ತಂದು ಧರ್ಮ ನಿರಪೇಕ್ಷತೆ ಮತ್ತು ಬಹುತ್ವಕ್ಕೆ ಧಕ್ಕೆ ತರುತ್ತಿದ್ದಾರೆ” ಎಂದು ಆರೋಪಿಸಿದರು.
“ಪರಿಣಾಮವಾಗಿ ದೇಶದಲ್ಲಿ ಶಾಂತಿ ಕದಡಿ, ಹಿಂಸೆ ಹೆಚ್ಚುತ್ತಿದೆ. ಜನರಿಗೆ ಭಯ ಮತ್ತು ಅಭದ್ರತೆ ಕಾಡುತ್ತಿದೆ. ಹಾಗಾಗಿ “ಹಳೆಯ ಸ್ಮಾರಕಗಳ ಸಂರಕ್ಷಣಾ ಕಾಯ್ದೆ-1991″ ಅಧಿನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರಿಂದ ಇಂತಹ ಘಟನೆಗಳು ಜರುಗದಂತೆ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹಿಂದುಳಿದ ವರ್ಗಗಳ ಶಕ್ತಿ ಹೆಚ್ಚಿಸಬೇಕು: ಪಣವಾನಂದ ಸ್ವಾಮಿ
“ಇತ್ತೀಚಿನ ವರ್ಷಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಮೂಲಭೂತವಾದಿ ಮತ್ತು ಕೋಮುವಾದಿ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತಲೆಯೆತ್ತಿವೆ. ಈ ಶಕ್ತಿಗಳು ಜನರ ಐಕ್ಯತೆಯನ್ನು ಮರೆಯುತ್ತಿವೆ. ಜನರ ನಡುವೆ ಗೋಡೆಗಳನ್ನು ನಿರ್ಮಾಣ ಮಾಡಿವೆ. ಜನರಲ್ಲಿ ದ್ವೇಷ, ಹಿಂಸೆ, ಅಸೂಯೆ ಮತ್ತು ಅಪನಂಬಿಕೆಗಳನ್ನು ಹುಟ್ಟಿಸಿ ಭಾರತದ ಐಕ್ಯತೆ ಮತ್ತು ಅಖಂಡತೆಯನ್ನು ಹಾಳು ಮಾಡುತ್ತಿರುವುದು ಖಂಡನೀಯ” ಎಂದರು.