ವಾಹನ ತಪಾಸಣೆ ವೇಳೆ ವ್ಯಕ್ತಿಯೊಬ್ಬ ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಸಿನಿಮೀಯ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ತಪಾಸಣೆ ಮಾಡುವ ವೇಳೆ ಕಾರು ಗುದ್ದಿ ಬ್ಯಾನೆಟ್ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಹತ್ತಿಸಿಕೊಂಡು ಚಾಲಕ ನೂರು ಮೀಟರ್ಗೂ ಹೆಚ್ಚು ದೂರ ಎಳೆದುಕೊಂಡು ಹೋಗಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ಘಟನೆ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು ಬಳಿ ನಡೆದಿದೆ. ಜಿಲ್ಲೆಯ ಭದ್ರಾವತಿಯ ಹೊಸಮನೆ ಬಡಾವಣೆ ನಿವಾಸಿ ಮಿಥುನ್ ಜಗದಾಳೆ ಎಂಬಾತನನ್ನು ಬಂಧಿಸಲಾಗಿದೆ. ಸದ್ಯ ಕಾರು ವಶಕ್ಕೆ ಪಡೆದುಕೊಂಡಿದ್ದು, ಶಿವಮೊಗ್ಗ ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿ ಇದ್ದರೂ ಚಾಲಕ ಕಾರು ನಿಲ್ಲಿಸದೇ ಸಹ್ಯಾದ್ರಿ ಕಾಲೇಜು ಗೇಟ್‍ನಿಂದ ಮತ್ತೂರು ರಸ್ತೆಯವರೆಗೂ ಸಾಗಿದ್ದಾನೆ. ಅಲ್ಲಿಂದ ಮುಂದೆ ಕಾರು ನಿಂತಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಪೊಲೀಸ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಬಾನೆಟ್ ಮೇಲೆ ಬಿದ್ದ ಸಿಬ್ಬಂದಿಯನ್ನ ಪ್ರಭು ಎಂದು ಗುರುತಿಸಲಾಗಿದೆ. ಕಿಯಾ ಸೊನೆಟ್ ಕಾರಿನಲ್ಲಿ ಬಂದವನನ್ನು ಭದ್ರಾವತಿಯ ಕೇಬಲ್ ಆಪರೇಟರ್ ಮಿಥುನ್ ಜಗದಾಳೆ ಎಂಬುದು ಗೊತ್ತಾಗಿದ್ದು, ಈತನ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಮಾಹಿತಿ ನೀಡಿದ್ದಾರೆ.
