25 ವರ್ಷಗಳಿಂದ ಕಾಣೆಯಾಗಿದ್ದ ‘ತುಂಗಭದ್ರಾ ಶುಗರ್ ವರ್ಕ್ಸ್’ ಸಕ್ಕರೆ ಕಾರ್ಖಾನೆಯವರು ಈಗ ರೈತರು ಮತ್ತು ನಿವಾಸಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಜಮೀನು ತಮ್ಮದೆಂದು ಜನರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ ತಾಲೂಕಿನ ಮಲವಗೊಪ್ಪ ಗ್ರಾಮದಲ್ಲಿ 1955ರಲ್ಲಿ ಮುಂಬೈನ ತುಂಗಭದ್ರಾ
ಶುಗರ್ ವರ್ಕ್ಸ್ ಎಂಬ ಕಂಪನಿಯು ಸಕ್ಕರೆ ಕಾರ್ಖಾನೆ ತೆರೆಯಲು ಸರ್ಕಾರವು ಯರಗನಾಳ್, ಹಸೂಡಿ, ಹಸೂಡಿ ಫಾರಂ, ಮಲವಗೊಪ್ಪ ಗ್ರಾಮಗಳಿಗೆ ಸೇರಿದ ಸುಮಾರು 3,685 ಎಕರೆ ಭೂಮಿಯನ್ನು ನೀಡಿತ್ತು. ಇದರಲ್ಲಿ ಸಾಕಷ್ಟು ಭೂಮಿಯನ್ನು ಕಂಪನಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿತ್ತು. ಭೂಮಿಯನ್ನು ಗುತ್ತಿಗೆ ಪಡೆದಿದ್ದ ಕಂಪನಿ 1994ರವರೆಗೆ ಕಾರ್ಖಾನೆ ನಡೆಸಿತ್ತು. 1994ರಲ್ಲಿ ಚೆನ್ನೈ ಮೂಲದ ‘ದೇವಿ ಶುಗರ್ ವರ್ಕ್ಸ್’ ಸಂಸ್ಥೆಗೆ ಹಸ್ತಾಂತರಿಸತ್ತು. 2-3 ವರ್ಷಗಳಲ್ಲಿಯೇ ಕಂಪನಿಯು ಕಾರ್ಖಾನೆಯನ್ನು ಮುಚ್ಚಿತು. ಇದರಿಂದಾಗಿ, ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಬದುಕು ಬೀದಿ ಪಾಲಾಯಿತು” ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
“ಕಾರ್ಖಾನೆ ಮುಚ್ಚಿದ್ದರಿಂದಾಗಿ ಬದುಕು ಕಳೆದುಕೊಂಡವರು ಹಾಗೂ ರೈತರು ಕಾರ್ಖಾನೆ ಇದ್ದ ಜಮೀನಿನಲ್ಲಿ ಕೃಷಿ ಮಾಡಲು ಆರಂಭವಿಸಿದ್ದರು. ಕಳೆದ 25 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಮಲವಗೊಪ್ಪ ಗ್ರಾಮದ ಸರ್ವೆ ನಂ. 33/186ರಲ್ಲಿ 18 ಎಕರೆ ಭೂಮಿಯಲ್ಲಿ ಸುಮಾರು 50 ವರ್ಷಗಳಿಂದ ಕಾರ್ಮಿಕರು ತಮ್ಮ ಸ್ವಂತ ಹಣದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರು ಪಂಚಾಯತಿಯಿಂದ ಖಾತೆಗಳನ್ನೂ ಪಡೆದಿದ್ದಾರೆ. ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಅಲ್ಲದೆ, 94-ಡಿ ಅಡಿಯಲ್ಲಿ ತಹಸೀಲ್ದಾರ್ ಹಾಗೂ ಮಾನ್ಯ ಉಪವಿಭಾಗಾಧಿಕಾರಿಗಳು ಹಕ್ಕುಪತ್ರವನ್ನೂ ನೀಡಲು ಕ್ರಮ ತೆಗೆದುಕೊಂಡಿದ್ದಾರೆ” ಎಂದು ವಿವರಿಸಿದ್ದಾರೆ.
“ಆದರೆ, ಈಗ ತುಂಗಭದ್ರಾ ಶುಗರ್ ವರ್ಕ್ಸ್ ಕಂಪನಿಯವರು ಕಾರ್ಮಿಕರು ವಾಸಿಸುತ್ತಿರುವ ಜಮೀನು ತಮ್ಮ ಹೆಸರಿನಲ್ಲಿದೆ ಎಂದು ವಾಣಿಜ್ಯ ಬಳಕೆಗಾಗಿ ಭೂಮಿಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಜಮೀನು ಮತ್ತು ಮನೆಗಳನ್ನು ಏಕಾಏಕಿ ವಶಪಡಿಸಿಕೊಂಡು ಡೆಮಾಲಿಷ್ ಮಾಡಲು ಯತ್ನಿಸಿದ್ದಾರೆ. ಹೈಕೋರ್ಟ್‌ನ WP: 25626/1991ರಲ್ಲಿ ಮೇಲ್ಕಂಡ ಕಂಪನಿಯವರು ಸಾಲ ಪಡೆದ ಕಾರಣ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇವರ ಮೇಲೆ ಮೊಕದ್ದಮೆ ಹೂಡಿತ್ತು. ನ್ಯಾಯಾಲಯವು LRMCR 150/79-80 ಆದೇಶದಂತೆ ವಿಶೇಷ ಜಿಲ್ಲಾಧಿಕಾರಿಗಳು ತುಂಗ ಭದ್ರ ಸಕ್ಕರೆ ಕಾರ್ಖಾನೆಗೆ ಸಂಬಂಧ ಪಟ್ಟ ಎಲ್ಲ ಆಸ್ತಿಗಳನ್ನೂ ಸರ್ಕಾರಿ ಜಾಗವೆಂದು ಹೇಳಿದೆ. ಕೇವಲ 50 ಎಕರೆ ಜಮೀನು ಕಾರ್ಖಾನೆ ಆಡಳಿತ ಮಂಡಳಿಗೆ ಸೇರಿರುತ್ತದೆ ಎಂದು ತಿಳಿಸಿರುತ್ತದೆ” ಎಂದು ವಿವರಿಸಿದ್ದಾರೆ.
“ಕಂಪನಿಯ ಆಸ್ತಿ ಎಲ್ಲವೂ ಸರ್ಕಾರಿ ಜಾಗವಾಗಿದ್ದು, 40-50 ವರ್ಷಗಳಿಂದ ಸ್ವಂತ ಹಣದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಾಗಿರುವ ರೈತರು, ಕಾರ್ಮಿಕರು ಜಮೀನುಗಳಿಗೆ ಖಾತೆ ಪಹಣಿ ಮಾಡಿಕೊಡಲಾಗಿದೆ. ಸರ್ವೆ ನಂ.33/186ರಲ್ಲಿರುವ ಮನೆಗಳಿಗೆ ಮತ್ತು ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರ ಕೊಡುವ ಕೆಲಸ ಬಾಕಿ ಇದ್ದು, ಕೂಡಲೇ ಹಕ್ಕುಪತ್ರ ನೀಡಲು ಜಿಲ್ಲಾಧಿಕಾರಿಗಳು ಆದೇಶ ನೀಡಬೇಕು” ಎಂದು ಒತ್ಆಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡ ಎಚ್.ಸಿ ಯೋಗೇಶ್, ವಿಶ್ವನಾಥ್ ಕಾಶಿ, ಎಂ.ಬಿ. ಕೃಷ್ಣಪ್ಪ, ಎನ್.ಟಿ. ಕುಮಾರ್, ಮಹಾದೇವ್, ಕೃಷ್ಣಮೂರ್ತಿ ಎಂ, ನಾಗೇಂದ್ರ, ಎಂ. ದೇವರಾಜ್, ಆರ್. ಸ್ವರೂಪ, ಎನ್. ಲಿಂಗರಾಜ್, ದಿನೇಶ್ ಕುಮಾರ್ ಸೇರಿದಂತೆ ಹಲವರು ಇದ್ದರು.