ಶಿವಮೊಗ್ಗ | ಬಿಸಿಎಂ ಹಾಸ್ಟೆಲ್‌ನಲ್ಲಿ ಗಾಂಜಾ ಹಾವಳಿ ಆರೋಪ; ಅಧಿಕಾರಿಗಳ ನಿರ್ಲಕ್ಷ್ಯ

Date:

Advertisements

ಗಾಂಜಾ ಹಾವಳಿಯಿಂದಾಗಿ ಮೂವರು ಯುವಕರ ನಡುವೆ ಹಾಸ್ಟೆಲ್‌ನಲ್ಲಿ ಗಲಾಟೆಯಾಗಿದ್ದು, ಹಾಸ್ಟೆಲ್‌ನಲ್ಲಿ ಗಾಂಜಾ ಸೇವಿಸಲು ಹಾಸ್ಟೆಲ್‌ನ ಕೆಲವರಿಂದ ಕುಮ್ಮಕ್ಕು ದೊರೆಯುತ್ತಿರುವುದಾಗಿ ಆರೋಪಗಳು ಕೇಳಿಬಂದಿವೆ.

ಶಿವಮೊಗ್ಗ ನಗರದ ಗಾಡಿಕೊಪ್ಪ ಗಜಾನನ ಹೋಟೆಲ್ ಹಿಂಭಾಗ ಇರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರುವ ಹಂತಕ್ಕೆ ತಲುಪಿದೆ.

ಹಾಸ್ಟೆಲ್ ಒಳಗೆ ಇಬ್ಬರು ಹೊರಗಡೆಯ ಯುವಕರು ಮತ್ತು ಹಾಸ್ಟೆಲ್‌ ವಿದ್ಯಾರ್ಥಿ ಮಿಥುನ್ ಗಾಂಜಾ ಸೇವಿಸಿ ಗಲಾಟೆ ಮಾಡಿಕೊಂಡಿರುವುದಾಗಿ ಸ್ಥಳೀಯರು ಡಿವೈಎಸ್‌ಪಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಇಆರ್‌ಎಸ್‌ 112 ಪೊಲೀಸರು ತೆರಳಿದ್ದಾರೆ. ಬಳಿಕ ಮದ್ಯ ಸೇವನೆಯಿಂದಾಗಿ ಗಲಾಟೆಯಾಗಿರುವುದಾಗಿ ಕೇಳಿಬಂದಿದೆ.

Advertisements

ಸ್ಥಳೀಯರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಪೊಲೀಸರು ಯಾವುದೇ ಯುವಕರನ್ನು ಬಂಧಿಸಿಲ್ಲ. ಆದರೆ, ಮಿಥುನ್‌ ಎಂಬ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿರುವುದಾಗಿ ತಿಳಿದುಬಂದಿದೆ. ಆ ವಿದ್ಯಾರ್ಥಿಯು ಹಾಸ್ಟೆಲ್‌ನಿಂದ ಪರಾರಿಯಾಗಿದ್ದಾನೆ. ಪೊಲೀಸರು ವಿದ್ಯಾರ್ಥಿಗಳ ದಾಖಲಾತಿಯನ್ನು ವಶಕ್ಕೆ ಪಡೆದಿದ್ದಾರೆ” ಎಂದು ತಿಳಿಸಿದ್ದಾರೆ.

“ಗಾಂಜಾ ಪ್ರಕರಣದಲ್ಲಿ ಹಾಸ್ಟೆಲ್ ವಾರ್ಡನ್‌ ಹಾಗೂ ಅಡುಗೆ ಭಟ್ಟರ ಸಾಥ್ ಇರುವುದರಿಂದ ಹಾಸ್ಟೆಲ್ ಯುವಕರಿಗೆ ಗಾಂಜಾ ಸೇವನೆಗೆ ಅವಕಾಶ ದೊರೆಯುತ್ತಿದೆ. ಈ ಹಿಂದೆಯೂ ಇದೇ ರೀತಿ ಪ್ರಕರಣ ನಡೆದಿದ್ದು, ಪೊಲೀಸರು ಎಚ್ಚರಿಸಿದ್ದರೂ ಕೂಡಾ ಹಾಸ್ಟೆಲ್‌ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿರುವುದು ಶೋಚನೀಯ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಬಿಸಿಎಂ ಹಾಸ್ಟೆಲ್ ವಾರ್ಡನ್ ಅಂಬರೀಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಿತ್ಯವೂ ರಾತ್ರಿ 8ರವರೆಗೂ ಮಾತ್ರ ನಮ್ಮ ಕೆಲಸ. ಬಳಿಕ ಹಾಸ್ಟೆಲ್‌ನಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ ರಾತ್ರಿ 8ರ ನಂತರ ಸಮಸ್ಯೆ ಉಂಟಾದಲ್ಲಿ ವಿದ್ಯಾರ್ಥಿಗಳು ಮಾಹಿತಿ ನೀಡುತ್ತಾರೆ ಅಥವಾ ಸಿಸಿಟಿವಿ ಗಮನಿಸಿ ಪೊಲೀಸ್ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ. ಯಾವುದೇ ಪದವಿ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ರಾತ್ರಿ ಪಾಳಿಯಲ್ಲಿ ಯಾವುದೇ ಸಿಬ್ಬಂದಿಗಳು ಇರುವುದಿಲ್ಲ. ಇಲ್ಲಿಯೂ ಕೂಡಾ ಯಾವುದೇ ಸಿಬ್ಬಂದಿಗಳು ಇರುವುದಿಲ್ಲ” ಎಂದು ತಿಳಿಸಿದ್ದಾರೆ.

“ಗಲಾಟೆ ಬಗ್ಗೆ ಮಾಹಿತಿ ಬಂತು ಹಾಗಾಗಿ ಪೊಲೀಸ್ ಗೆ ಮಾಹಿತಿ ತಿಳಿಸಿದೆ. ಶನಿವಾರ ರಾತ್ರಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಸಂಬಂಧ ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡಿದ್ದರೋ ಅಥವಾ ಕುಡಿದು ಬಂದಿದ್ದರೋ ಎಲ್ಲವೂ ಪೊಲೀಸ್ ತನಿಖೆಯಿಂದ ಮಾಹಿತಿ ಹೊರಬರಬೇಕಿದೆ. ಪೊಲೀಸರು ಎರಡ್ಮೂರು ದಿನಗಳಲ್ಲಿ ಮಾಹಿತಿ ನೀಡಲಿದ್ದಾರೆ” ಎಂದು ತಿಳಿಸಿದರು.

“ಅಂದೇ ಆ ವಿದ್ಯಾರ್ಥಿಯನ್ನು ಹಾಸ್ಟೆಲ್‌ನಿಂದ ತೆಗೆದು ಹಾಕಿದ್ದೇವೆ. ಇಂದು ಅವರ ಪೋಷಕರನ್ನು ಕರೆಸಿದ್ದೇವೆ. ಅವರು ಬಂದ ಬಳಿಕ ವಿಚಾರಣೆ ನಡೆಸಿದಾಗ ವಾಸ್ತವತೆ ತಿಳಿಯಲಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇವೆ” ಎಂದರು ವಾರ್ಡನ್‌ ಅಂಬರೀಶ್‌ ಹೇಳಿದರು.

“ಊಟ ಚನ್ನಾಗಿಲ್ಲವೆಂದು ಹೇಳಿದರೆ, ಮೂಲ ಸೌಕರ್ಯಗಳ ಕುರಿತು ಚರ್ಚಿಸಿದರೆ ಅಡುಗೆ ಸಹಾಯಕ ಗಣೇಶ್ ಎಂಬುವವರು ಹೊರಗಿನವರಿಂದ ಬೆದರಿಕೆ ಹಾಕಿಸುತ್ತಾರೆ. ನಮಗೆ ಈ ಹಾಸ್ಟೆಲ್‌ನಲ್ಲಿ ಭದ್ರತೆ ಇಲ್ಲದಂತಾಗಿದ್ದು, ಪುಂಡ ಪೋಕರಿಗಳ ಅಡ್ಡವಾದಂತಾಗಿದೆ. ಏಕಾಗ್ರತೆಯಿಂದ ಓದಲು ಆಗುತ್ತಿಲ್ಲ. ನಾವು ಬಡ ಕುಟುಂಬದಿಂದ ಬಂದಿರುವ ವಿದ್ಯಾರ್ಥಿಗಳು, ಮನೆಯಿಂದ ಓಡಾಡಿಕೊಂಡು ಓದಲು ಆಗುವುದಿಲ್ಲವೆಂದು ಹಾಸ್ಟೆಲ್‌ ಉಪಯೋಗ ಪಡೆದುಕೊಂಡರೆ, ಇಲ್ಲಿಯ ಸ್ಥಿತಿ ಬೇರೆಯೇ ಇದೆ” ಎಂದು ಕೆಲವು ವಿದ್ಯಾರ್ಥಿಗಳು ಅವಲತ್ತುಕೊಂಡರು.

ತುಂಗಾನಗರ ಠಾಣೆ ಪೊಲೀಸರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅಡುಗೆ ಸಹಾಯ ಗಣೇಶ್ ಮತ್ತು ವಾರ್ಡನ್ ಅಂಬರೀಶ್ ಅವರ ವಿರುದ್ಧ ವಿದ್ಯಾರ್ಥಿಗಳಿಗೆ ಬೆದರಿಸುವ, ಕಿರುಕುಳ ನೀಡಿದ ಪ್ರಕರಣ ಬಂದಿದೆ. ಈ ಹಿಂದೆಯೂ ಇದೇ ರೀತಿಯ ಪ್ರಕರಣದ ದೂರು ಬಂದಿತ್ತು. ತೊಂದರೆ ಕೊಡದಂತೆ ಎಚ್ಚರಿಕೆ ಕೊಟ್ಟಿದ್ದೇವೆ. ಆದರೂ ಮತ್ತೆ ಮರುಕಳಿಸುತ್ತಿದೆ” ಎಂದು ಹೇಳಿದರು.

ತುಂಗಾನಗರ ಠಾಣೆ ಪೊಲೀಸ್ ಉಮೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮಗೆ ಕರೆ ಬಂತು. ಹಾಗಾಗಿ ನಾವು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ವಿದ್ಯಾರ್ಥಿ ಹಾಗೂ ಹೊರಗಿನ ಯುವಕರು ಇದ್ದರು. ನಂತರ ತಪಾಸಣೆ ಮಾಡಲು ತೆರಳಿದಾಗ ಒಬ್ಬ ಯುವಕ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಅವನ ಬೈಕ್ ವಶಕ್ಕೆ ಪಡೆದಿದ್ದೇವೆ. ಅದು ಹೊಸ ಬೈಕ್ ಆಗಿದ್ದು, 15 ಕೀಮಿ ಅಷ್ಟೇ ಸಂಚರಿಸಿದೆ. ಕೆಲವು ಮೊಬೈಲ್‌ಗಳನ್ನೂ ಕೂಡ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.

“ಪೊಲೀಸರಿಂದ ಥಳಿತಕ್ಕೊಳಗಾದ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಇಲ್ಲದ ಕುರಿತು ಪೊಲೀಸರನ್ನು ಕೇಳಿದಾಗ, ವಿದ್ಯಾರ್ಥಿಗಳ ಕುರಿತು ಅವರ ಪೋಷಕರಿಗೆ ತಿಳಿಸುವುದು ವಾರ್ಡನ್‌ ಜವಾಬ್ದಾರಿ. ತೀರಾ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ನಾವು ಸ್ಥಳಕ್ಕೆ ಭೇಟಿ ನೀಡಿ ಗಲಾಟೆ ತಡೆಯಬಹುದು. ಆದರೆ, ನಂತರ ವಿದ್ಯಾರ್ಥಿಗಳ ಜವಾಬ್ದಾರಿ ನಮ್ಮದಲ್ಲ” ಎಂದು ತಿಳಿಸಿದರು.

“ಬಿಸಿಎಂ ಹಾಸ್ಟೆಲ್‌ನಲ್ಲಿ ಸೆಕ್ಯೂರಿಟಿ ಇಲ್ಲ. ಅಲ್ಲಿ ದಿನಾ ಏನಾಗುತ್ತೆ ಅಂತ ನಾವು ನೋಡಿಕೊಂಡು ಇರುವುದಕ್ಕೆ ಆಗತ್ತ. ಗಾಂಜಾ ಸಂಬಂಧ ಯಾರಾದರೂ ನಮಗೆ ಮಾಹಿತಿ ನೀಡಿದರೆ, ದೂರು ನೀಡಿದರೆ ತನಿಖೆ ನಡೆಸುತ್ತೇವೆ” ಎಂದು ಪೊಲೀಸರು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಎಂ ಅಧಿಕಾರಿ ಪವಿತ್ರ ನಂದನ್ ಅವರನ್ನು ಈ ದಿನ.ಕಾಮ್‌  ಸಂಪರ್ಕಿಸಿದ್ದು, “ಹಾಸ್ಟೆಲ್‌ನಲ್ಲಿ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿರುವುದಾಗಿ ತಿಳಿದುಬಂದಿದೆ. ಆ ವಿದ್ಯಾರ್ಥಿಗಳನ್ನು ತೆಗೆದು ಹಾಕಿದ್ದೇವೆ. ವಾರ್ಡನ್‌ ಮತ್ತು ಅಡುಗೆ ಸಹಾಯಕರ ಕಿರುಕುಳದ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಇದೀಗ ನಾನು ಹಾಸ್ಟೆಲ್‌ ಬಳಿ ಹೊರಡುತ್ತಿದ್ದೇನೆ. ವಿಚಾರಣೆ ನಡೆಸಿ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ” ಎಂದು ಪ್ರತಿಕ್ರಿಯಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ಲೋರೈಡ್ ನೀರಿನಿಂದ ಮುಕ್ತಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ

“ಅನಧಿಕೃತವಾಗಿ ಹೊರಗಿನ ಯುವಕರು ಹಾಸ್ಟೆಲ್ ಒಳಗೆ ಇದ್ದರು. ನಂತರ ಇವರು ಗಾಂಜಾ ಸೇವಿಸಿದ್ದರೋ ಅಥವಾ ಕುಡಿದಿದ್ದರೋ ತನಿಖೆ ಬಳಿಕ ತಿಳಿಯಲಿದೆ. ಆದರೆ, ಅದಕ್ಕೂ ಮುನ್ನ ಪೊಲೀಸರು ಹಾಸ್ಟೆಲ್ ಒಳಗೆ ಬಂದು ಕೆಲವು ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ. ಹಾಸ್ಟೆಲ್‌ ಸಿಬ್ಬಂದಿಗಳ ಕುಮ್ಮಕ್ಕಿಲ್ಲದೆ ವಿದ್ಯಾರ್ಥಿಗಳು ಹೇಗೆ ಸುಲಭವಾಗಿ ಗಾಂಜಾ ಸೇವನೆಗೆ ಮುಂದಾಗುತ್ತಾರೆ” ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

“ಬಿಸಿಎಂ ಹಾಸ್ಟೆಲ್ ಎದುರು ಇರುವ ರಸ್ತೆಯಲ್ಲಿ ಎಂಎಸ್‌ಐಎಲ್ ಮದ್ಯದ ಅಂಗಡಿ ಕೂಡ ಇದೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಕುರಿತು ಕ್ರಮ ಜರುಗಿಸಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಸತ್ಯಾಸತ್ಯತೆಗಳನ್ನು ತಿಳಿಯಲು ವಾರ್ಡನ್ ಮತ್ತು ಅಡುಗೆ ಸಹಾಯಕರ ತನಿಖೆ ಆಗಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X