ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಗ್ರಾಮೀಣ ಕೃಪಾಂಕ ಕಲ್ಪಿಸಿಕೊಡುವ ಮೂಲಕ ಗ್ರಾಮೀಣ ಪ್ರದೇಶದ ಯುವಜನರಿಗೆ ಉದ್ಯೋಗಕ್ಕೆ ದಾರಿ ದೀಪವಾಗಿದ್ದರು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹಣಗೆರೆಕಟ್ಟೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.
“ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಅನೇಕ ಯೋಜನೆಗಳಾದ ಆಶ್ರಯ, ಆರಾಧನಾ ಯೋಜನೆಗಳು ಇಂದಿಗೂ ಬಡವರ ಮನದಲ್ಲಿ ಶಾಶ್ವತವಾಗಿ ಬೇರೂರಿವೆ” ಎಂದು ಹೇಳಿದರು.
“ದೇವರಾಜ ಅರಸ್ ನಂತರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದವರು ಬಂಗಾರಪ್ಪನವರು. ಅವರ ಜ್ಞಾನ ಪ್ರತಿಭೆ ಅಪಾರವಾಗಿದ್ದು, ಆದರ್ಶ ವ್ಯಕ್ತಿಯಾಗಿ ಬಾಳಿದ ಅವರು ಬದುಕಿನಲ್ಲಿ ಹೋರಾಟ ಮನೋಭಾವವನ್ನು ಬೆಳೆಸಿಕೊಂಡಿದ್ದರು. ಅದೇ, ಹಾದಿಯಲ್ಲಿ ನಾನೂ ಕೂಡಾ ಸಾಗುತ್ತೇನೆ” ಎಂದು ಹೇಳಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, “ಗ್ಯಾರಂಟಿ ಯೋಜನೆಗಳನ್ನು ರದ್ದುಮಾಡಲು ಬಿಜೆಪಿಯವರು ಸಂಚು ಹೂಡುತ್ತಿದ್ದಾರೆ. ಅದು ಆಗಕೂಡದೆಂದರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಆಶೀರ್ವದಿಸಬೇಕು” ಎಂದರು.
“ಜನಪರ ಆಡಳಿತಕ್ಕೆ ಮತ್ತೊಂದು ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಹಲವು ಯೋಜನೆಗಳನ್ನು ನೀಡುತ್ತಿದೆ. ಮನೆ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ, ಮಹಿಳೆಯರಿಗೆ ಉಚಿತ ಬಸ್ ಸಂಚಾರ, ಪ್ರತಿಮನೆಗೂ ಉಚಿತ ವಿದ್ಯುತ್, ನಿರುದ್ಯೋಗಿಗಳಿಗೆ ತಿಂಗಳ ಗೌರವಧನ, ಪಡಿತರ ಅಕ್ಕಿ ಹೆಚ್ಚುವರಿ ಹಣ ಈ ರೀತಿಯ ಹಲವು ಯೋಜನೆಗಳನ್ನು ನೀಡಿದೆ” ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಮಾತನಾಡಿ, “ಬಿ ವೈ ರಾಘವೇಂದ್ರ ಅವರು ಸಂಸದರಾಗಿ ಆಯ್ಕೆಗೊಂಡು ದಶಕ ಕಳೆದಿದೆ. ಇಲ್ಲಿ ಕೇಂದ್ರ ಸರ್ಕಾರದ ಹಂತದಲ್ಲಿ ಪರಿಹರಿಸಬಹುದಾದ ಅನೇಕ ಸಮಸ್ಯೆಗಳಿವೆ. ಅದರಲ್ಲಿ ಮುಖ್ಯವಾಗಿ ನೆಟ್ವರ್ಕ್ ಸಮಸ್ಯೆಯೂ ಒಂದು. ಆದರೆ, ಈ ಸಮಸ್ಯೆಗಳಿಗೆ ನ್ಯಾಯ ಒದಗಿಸಲು ಇಂದಿಗೂ ಸಾಧ್ಯವಾಗಿಲ್ಲ” ಎಂದು ದೂರಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, “ಹಣಗೆರೆಕಟ್ಟೆ ಗ್ರಾಮ ಸೌಹಾರ್ದಯುತ ಕೇಂದ್ರ. ಅದೇ ರೀತಿ, ಇಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಕೊಡುಗೆ ಸಾಕಷ್ಟಿದೆ. ಅವರ ಋಣ ತೀರಿಸಬೇಕಾದರೆ, ಗೀತಾ ಶಿವರಾಜಕುಮಾರ್ ಅವರಿಗೆ ಬೆಂಬಲಿಸಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸೊನ್ನ ಬ್ಯಾರೆಜ್‌ನಿಂದ ಘಾಣಗಾಪುರ ಬ್ಯಾರೆಜ್‌ವರೆಗೆ ನೀರು ಬಿಡುವಂತೆ ಆಗ್ರಹ; 20ನೇ ದಿನಕ್ಕೆ ಕಾಲಿಟ್ಟ ಆಹೋರಾತ್ರಿ ಧರಣಿ
ಕಾಂಗ್ರೆಸ್ ಮುಖಂಡ ಸುರೇಶ್ ಕಲ್ಲುಕೊಪ್ಪ ಅವರು ಮಾಜಿ ಮುಖ್ಯಮಂತ್ರಿ ಅವರ ರೀತಿಯಲ್ಲಿ ಮಿಮಿಕ್ರಿ ಮಾಡಿ ರಂಜಿಸಿದರು.
ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ, ಲೋಕೇಶ್ ಇದ್ದರು.
