ಶಾಲಾ ವಿದ್ಯಾರ್ಥಿನಿಯೊಬ್ಬಳ ಮೃತದೇಹ ರೈಲ್ವೇ ಕಾಮಗಾರಿಗಾಗಿ ತೋಡಿದ್ದ ಗುಂಡಿಯಲ್ಲಿ ಪತ್ತೆಯಾಗಿರುವ ಘಟನೆ ಶಿವಮೊಗ್ಗದ ಕೋಟೆ ಗಂಗೂರಿನಲ್ಲಿ ನಡೆದಿದೆ.
ಗಂಗೂರಿನಲ್ಲಿ ರೈಲ್ವೇ ಕಾಮಗಾರಿಗಾಗಿ 8 ಅಡಿ ಆಳದ ಗುಂಡಿಯನ್ನು ತೆಗೆಯಲಾಗಿತ್ತು. ಆ ಗುಂಡಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಗುಂಡಿಯಲ್ಲಿ ನೀರು ತುಂಬಿದ್ದರಿಂದ ಗುಂಡಿ ಕಾಣಿಸದೇ ಬಾಲಕಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಬುಧವಾರ, ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ 11 ವರ್ಷದ ಬಾಲಕಿ ಚಿತ್ರ, ದಾರಿ ಮಧ್ಯೆ ಗದ್ದೆಗೆ ಹೋಗಿ ಪೋಷಕರಿಂದ ಮನೆಯ ಕೀ ಪಡೆದುಕೊಂಡು ಮನೆಗೆ ಹೊರಟಿದ್ದಳು. ಆದರೆ, ಆಕೆ ಮನೆಗೆ ಹೋಗಿರಲಿಲ್ಲ. ಇದರಿಂದಾಗಿ ಗಾಬರಿಗೊಂಡ ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಆಕೆಯ ಮೃತದೇಹ ಗುಂಡಿಯಲ್ಲಿ ಪತ್ತೆಯಾಗಿದೆ.
ಕೋಟೆಗಂಗೂರು ಗ್ರಾಮದ ಸರ್ವೆ ನಂ.107 ರಲ್ಲಿರುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಾಗಿ ತೆಗೆದಿದ್ದ ಗುಂಡಿಯಲ್ಲಿ ನೀರು ನಿಂತಿತ್ತು. ಆ ಗುಂಡಿಯಲ್ಲಿ ವಿದ್ಯಾರ್ಥಿನಿಯ ಸಮವಸ್ತ್ರ ಕಂಡುಬಂದಿದೆ. ಗುಂಡಿ ಇಳಿದು ನೋಡಿದಾಗ ಚಿತ್ರಾ ಪತ್ತೆಯಾಗಿದ್ದಾಳೆ. ಚಿತ್ರಾಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ, ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಾಯಕಾರಿ ಗುಂಡಿಗಳನ್ನ ಮುಚ್ಚದೇ ನಿರ್ಲಕ್ಷ್ಯ ತೋರಿದ್ದಾರೆಂದು ರೈಲ್ವೇ ಅಧಿಕಾರಿ ಚೇತನ್, ಇಲಾಖೆ ಇಂಜಿನಿಯರ್ ಹರ್ಷವರ್ದನ್, ಗುತ್ತಿಗೆದಾರ ಸತ್ಯನಾರಯಣ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.