ವಿದ್ಯಾರ್ಥಿನಿಯೊಬ್ಬಳ ಸಾವು ಪ್ರಕರಣ ಮತ್ತು ಅಪ್ರಾಪ್ತೆಯರಿಗೆ ಲೈಂಗಿಕ ಕುರುಕುಳ ನೀಡಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆಯ ಸಾಗರದ ಖಾಸಗಿ ವಸತಿ ಶಾಲೆಯ ಮಾಲೀಕನನ್ನು ಬಂಧಿಸಲಾಗಿದೆ. ಆರೋಪಿ ಮಂಜಪ್ಪನ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವನಶ್ರೀ ಖಾಸಗಿ ವಸತಿ ಶಾಲೆಯ ಬಾಲಕಿ ಜೂನ್ 8ರಂದು ಮೃತಪಟ್ಟಿದ್ದರು. ಆಕೆಗೆ ಶಾಲೆಯ ಮಾಲೀಕ ಕೆಲವು ಮಾತ್ರೆಗಳನ್ನು ಕೊಟ್ಟಿದ್ದರು ಮತ್ತು ಹೆಚ್ಚಾಗಿ ನೀರು ಕುಡಿಸಿದ್ದರು. ಪರಿಣಾಮ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.
8ನೇ ತರಗತಿಯಲ್ಲಿ ಓದುತಿದ್ದ ತೇಜಸ್ವಿನಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯದೆ ತನ್ನ ಕೊಠಡಿಗೆ ಕರೆದೊಯ್ದ ಆರೋಪಿ ಮಾಲೀಕ, ಆಕೆಗೆ ಸಿಕ್ಕಾಪಟ್ಟೆ ನೀರು ಕುಡಿಸಿದ್ದರು. ಇದರಿಂದಾಗಿ, ಆಕೆ ಆಸ್ವಸ್ಥಳಾದ್ದು, ಬಳಿಕೆ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದರು ಎಂದು ವರದಿಯಾಗಿದೆ.
ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆತನನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ | ಗಾಳಿಮಳೆಗೆ ಮನೆ ಮೇಲೆ ಉರುಳಿದ ಬೃಹತ್ ಮರ; ಮೂವರು ಪಾರು
ಅದೇ ಆರೋಪಿ ಮಾಲೀಕ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಮತ್ತೊಂದು ಪ್ರಕರಣ ದಾಖಲಾಗಿದೆ.
ಎರಡೂ ದೂರುಗಳಿಗೆ ಸಂಬಂಧಿಸಿದಂತೆ ಆರೋಪಿ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 354, 504, 506 ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆಯ ವಿವಿಧ ಸೆಕ್ಷನ್‌ಗಳು ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಹೇಳಿದ್ದಾರೆ.