ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಗೋವಿಂದಾಪುರದಲ್ಲಿ ನಿರ್ಮಿಸಲಾಗಿರುವ ಆಶ್ರಯ ಮನೆ ಯೋಜನೆಯಡಿ ನಿರ್ಮಾಣ ಮಾಡಿದ ಮನೆಗಳನ್ನು ವಸತಿ ಸಚಿವ ಜಮೀರ್ ಅಹಮ್ಮದ್ ಅವರು ಲಾಟರಿ ಮೂಲಕ 652 ಫಲಾನುಭವಿಗಳಿಗೆ ಮನೆ ಹಸ್ತಾಂತರ ಮಾಡಿದರು.
ಈ ವೇಳೆ ಸಚಿವ ಜಮೀರ್ ಅಹಮ್ಮದ್ ಅವರು ಮಾತನಾಡಿ, “ಇಂದು ಬಹಳ ವರ್ಷಗಳ ಕನಸು ನನಸಾಗಿದೆ. ಶಾಸಕ ಚೆನ್ನಿಯವರು ಫಲಾನುಭವಿಗಳಿಗೆ ಮನೆ ಕೊಡಿಸುವ ವಿಚಾರದಲ್ಲಿ ನನಗೆ ವಿಧಾನ ಸೌದದ ಹೊರಗೆ ಹಾಗೂ ಒಳಗೆ ಬಹಳ ಒತ್ತಡ ಹಾಕಿದ್ದರು. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬೆಂಗಳೂರಿಗೆ ಬಂದು ಇಲ್ಲಿನ ಕಾರ್ಯ ಬೇಗ ಮುಗಿಸಿಕೊಡುವಂತೆ ನನಗೆ ಹೇಳಿದ್ದರು” ಎಂದರು.
“ಕಾಮಗಾರಿ ತಡವಾದ ಕಾರಣ ಮನೆಗಳ ವೆಚ್ಚ ಹೆಚ್ಚಾಗಿದೆ. ಗೋವಿಂದಾಪುರ ಆಶ್ರಯ ಮನೆಗಳಿಗೆ ಹೆಚ್ಚಾಗಿರುವ ಹಣವನ್ನು ಕಟ್ಟಿರುವ ಫಲಾನುಭವಿಗಳಿಗೆ ಒಂದೂವರೆ ತಿಂಗಳಲ್ಲಿ ಕಟ್ಟಿರುವ ಹೆಚ್ಚುವರಿ ಹಣವನ್ನು ಸರ್ಕಾರದಿಂದ ವಾಪಸ್ ಮಾಡಲಾವುದು” ಎಂದು ತಿಳಿಸಿದರು.
“ವಿದ್ಯುತ್ ಪೂರೈಕೆಗಾಗಿ ₹12 ಕೋಟಿ ಮನವಿ ಮಾಡಿದ್ದಾರೆ. ಒಂದೂವರೆ ತಿಂಗಳಲ್ಲಿ ಈ ಅನುದಾನವನ್ನು ಬಿಡುಗಡೆ ಮಾಡುತ್ತೇವೆ. ಬಡವರಿಗಾಗಿ ಸೂರು ಒದಗಿಸುವ ವಿಚಾರದಲ್ಲಿ ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ಸಿಗಲಿದೆ” ಎಂದು ಭರವಸೆ ನೀಡಿದರು.