ಮೊನ್ನೆರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಕೊಚ್ಚಿ ಹೋಗಿದ್ದು, ರೈತರು ಬೆಳೆದ ಶುಂಠಿ, ಭತ್ತದ ಗದ್ದೆಗಳು ಸಂಪೂರ್ಣ ನಾಶವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.
ಆಚಾಪುರ ಗ್ರಾಮ ಪಂಚಾಯಿತಿಯ ತಂಗಳವಾಡಿ ಗ್ರಾಮದ ಅಮ್ಮನ ಕೆರೆಯ ಕೋಡಿ ಕಾಲುವೆ ಒಡೆದು ಅಡಿಕೆ ತೋಟ, ಭತ್ತದ ಗದ್ದೆ, ಶುಂಠಿ ಬೆಳೆಗಳು ಕೊಚ್ಚಿ ಹೋಗಿ ಅಪಾರ ಹಾನಿ ಸಂಭವಿಸಿದೆ. ಗಿಳಾಲಗುಂಡಿ ಅಮ್ಮನ ಕೆರೆ ಕೋಡಿ ಕಾಲುವೆ ಒಡೆದ ಪರಿಣಾಮ, ಗಿಳಾಲ ಗುಂಡಿಯ ಬಸ್ ನಿಲ್ದಾಣ ಸಂಪೂರ್ಣ ಕೊಚ್ಚಿ ಹೋಗಿದೆ.
ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿದ ಸೋಮಶೇಖರ್ ಲಾವಿಗೆರೆ ಮಾತನಾಡಿ, “ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ರಸ್ತೆ ಮೋರಿ, ಅಮ್ಮನ ಕೆರೆಯ ಕೋಡಿ ಕಾಲುವೆಯ ನೀರು ಹರಿದ ಕಾರಣ ರೈತರು ಬೆಳೆದಂತಹ ಶುಂಠಿ ಮತ್ತು ಭತ್ತದ ಗದ್ದೆಗಳಿಗೆ ಅಪಾರ ಹಾನಿ ಸಂಭವಿಸಿದೆ. ಗಿಳಾಲ ಗುಂಡಿ, ಕೆರೆ ಹಿತ್ತಲು, ಪತ್ರೆ ಹೋಂಡಾ, ತಂಗಳವಾಡಿ ಸೇರಿದಂತೆ ಆನೇಕ ಭಾಗದಲ್ಲಿ ಮಳೆಯಿಂದ ರಸ್ತೆಗಳು, ಕಾಲು ಸೇತುವೆ, ಕಾಲುವೆಗಳು, ಕಿರು ಸೇತುವೆ ಕೊಚ್ಚಿ ಹೋಗಿದ್ದು, 5 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಹಾನಿಯಾದ ಬಗ್ಗೆ ಸಂಪೂರ್ಣ ವರದಿ ಸಂಗ್ರಹಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ತುಂಗಾನದಿ ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ ಹೆಚ್ಚಳ; ನೀರನ್ನು ಕುದಿಸಿ, ಆರಿಸಿ ಕುಡಿಯುವಂತೆ ಸೂಚನೆ
ರಮಾನಂದ್ ಸಾಗರ್ ಮಾತನಾಡಿ, “ಕಳೆದ ರಾತ್ರಿ ಸುರಿದ ಮಳೆಯಿಂದ ರೈತರಲ್ಲಿ ಆತಂಕ ಉಂಟಾಗಿತ್ತು. ರೈತರು ಬೆಳೆದ ಬೆಳೆ ಕೈಸೇರುವ ಮೊದಲೇ ಮಳೆಗೆ ಆಹುತಿಯಾಗಿದೆ. ಇದರಿಂದ ರೈತರಿಗೆ ತುಂಬಲಾರದ ನಷ್ಟ ಸಂಭವಿಸಿದೆ” ಎಂದರು.
ಮಳೆ ಹಾನಿ ಪ್ರದೇಶಕ್ಕೆ ತಹಶೀಲ್ದಾರ್ ಚಂದ್ರಶೇಖರ್ ನಾಯಕ್, ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್, ಚೇತನ್ ರಾಜ್ ಕಣ್ಣೂರ್, ಕಲೀಮುಲ್ಲಾ ಖಾನ್, ರೆಹಮತ್ ತುಲ್ಲಾ, ಕಂದಾಯ ಅಧಿಕಾರಿ ಕವಿರಾಜ್, ಕೃಷಿ ಅಧಿಕಾರಿ ಚಂದ್ರ ಕುಮಾರ್ ಸೇರಿದಂತೆ ಬಹುತೇಕರು ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದರು.