ನೇರ ನೇಮಕಾತಿಗೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರು ಜಲ ಮಂಡಳಿ ಕಚೇರಿ ಆವರಣದಲ್ಲಿ ಆರಂಭಿಸಿರುವ(ಮಾ.3) ಅನಿರ್ಧಿಷ್ಟಾವಧಿ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.
“ಪಾಲಿಕೆಯಲ್ಲಿ ಕಳೆದ ಸುಮಾರು 15 ರಿಂದ 20 ವರ್ಷಗಳಿಂದ 116 ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇದರಲ್ಲಿ ನೀರುಗಂಟಿ, ನೀರು ಸರಬರಾಜು ಸಹಾಯಕರಾಗಿ ವಿವಿಧ ವೃಂದದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸರ್ಕಾರವು ನೌಕರರನ್ನು ನೇರ ನೇಮಕಾತಿ/ನೇರ ಪಾವತಿ ವ್ಯವಸ್ಥೆಯಡಿ ನೇಮಿಸಿಕೊಳ್ಳಲು ಜಿಲ್ಲಾ ನಗರಾಭಿವೃದ್ದಿ ಕೋಶದಿಂದ ಮಾಹಿತಿ ಪಡೆದುಕೊಂಡಿದೆ. ಆದರೆ ಇಲ್ಲಿಯವರೆಗೂ ಆದೇಶವಾಗಿಲ್ಲ. ಕೇವಲ ಕಡತಗಳಿಗಷ್ಟೆ ಸೀಮಿತವಾಗಿದೆ” ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

ಈ ಹಿನ್ನೆಲೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಸ್ಥಗಿತಗೊಳಿಸುವುದಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ | ಪತ್ರಿಕಾ ಭವನದ ಸಮಗ್ರ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇಮಕ
ಈ ನಡುವೆ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹಾಗೂ ಅವರ ಪುತ್ರ ಕೆ ಇ ಕಾಂತೇಶ್ ಅವರು, ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ನೌಕರರ ಅಹವಾಲು ಆಲಿಸಿದರು. ನೌಕರರ ಬೇಡಿಕೆ ಕುರಿತಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಭರವಸೆ ನೀಡಿದರು.
