ದಲಿತ ಮಹಿಳೆಗೆ ಅವಮಾನ ಮಾಡಿರುವ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ಟಿ ಡಿ ಮೇಘರಾಜ್ ಸೇರಿದಂತೆ ಇತರರು ಬಹಿರಂಗ ಕ್ಷಮೆಯಾಚನೆ ಮಾಡುವಂತೆ ಒತ್ತಾಯಿಸಲಾಗಿದೆ.
ಸಾಗರ ನಗರಸಭೆ ಸದಸ್ಯೆಯಾಗಿರುವ ಸಂತ್ರಸ್ತೆ ಎನ್ ಲಲಿತಮ್ಮ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬುಧವಾರ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ನನ್ನನ್ನು ಸಭೆಯಿಂದ ಹೊರಗೆ ಕಳುಹಿಸುವುದು, ನನ್ನನ್ನು ಅಪರಾಧಿಯೆಂದು ಸಂಬೋಧಿಸುವ ಮೂಲಕ ನಗರಸಭೆ ಬಿಜೆಪಿ ಸದಸ್ಯರಾದ ಟಿ ಡಿ ಮೇಘರಾಜ್, ಗಣೇಶ್ ಪ್ರಸಾದ್, ಮಧುರಾ ಶಿವಾನಂದ್, ವಿ ಮಹೇಶ್ ನನಗೆ ತೀರ ಅವಮಾನ ಮಾಡಿದ್ದಾರೆ” ಎಂದು ಆರೋಪಿಸಿದರು.
“ಸಾಗರ ನಗರಸಭೆ ಇತಿಹಾಸದಲ್ಲಿಯೇ ದಲಿತ ಮಹಿಳೆಗೆ ಅವಮಾನ ಮಾಡಿರುವುದು ಇದೇ ಮೊದಲು. ನಾನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದೇನೆಯೇ ಹೊರತು ವೈಯಕ್ತಿಕ ಹಿತಾಸಕ್ತಿಯಿಂದಲ್ಲ. ಆದರೆ ಬಿಜೆಪಿ ಸದಸ್ಯರು ತಮ್ಮ ಗೋಡ್ಸೆ ಸಂಸ್ಕೃತಿಯನ್ನು ಪ್ರಚುರಪಡಿಸಿದ್ದಾರೆ. ಇದು ಗಾಂಧಿ, ಅಂಬೇಡ್ಕರ್, ಬುದ್ದ, ಬಸವರು ಹುಟ್ಟಿದ ನಾಡು. ಇಲ್ಲಿ ಗೋಡ್ಸೆ ಸಂಸ್ಕೃತಿ ವಿಜೃಂಭಿಸಲು ಬಿಡುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅರೆಬರೆ ರಸ್ತೆ ಕಾಮಗಾರಿ : ಗ್ರಾಮಸ್ಥರಿಂದ ಆಕ್ರೋಶ; ಅಧಿಕಾರಿಗಳಿಗೆ ಹಿಡಿಶಾಪ
“ನನ್ನನ್ನು ದಲಿತಳೆಂದು ಅವಮಾನಿಸುವ ಮೂಲಕ ಬಿಜೆಪಿ ಸದಸ್ಯರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅವಮಾನಿಸಿದ್ದಾರೆ. ತಕ್ಷಣ ಬಹಿರಂಗ ಕ್ಷಮೆ ಕೋರದೆ ಹೋದಲ್ಲಿ ಕಾನೂನು ಹೋರಾಟ ಮಾಡುತ್ತೇನೆ” ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ರವಿ ಲಿಂಗನಮಕ್ಕಿ, ಸರಸ್ವತಿ ನಾಗರಾಜ್, ಎಲ್ ಚಂದ್ರಪ್ಪ ಇದ್ದರು.