ಅಶ್ಲೀಲ ಸಂಜ್ಞೆ, ಲೈಂಗಿಕ ಕಿರುಕುಳ, ಸಾಮಾಜಿಕ ಜಾಲತಾಣದಲ್ಲಿ ಅಸಹ್ಯ ಪದ ಬಳಕೆ, ಮಾನಸಿಕ ಕಿರುಕುಳ ನೀಡುತ್ತಿದ್ದ ಮಧುಕರ ಮಯ್ಯ ಎಂಬ ವ್ಯಕ್ತಿಯ ವಿರುದ್ಧ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ರೋಟರಿ ಇನ್ನರ್ ವೀಲ್ ಸಂಸ್ಥೆಯ ಪದ್ಮಜಾ ಜೋಯ್ಸ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಕಳೆದ ಒಂದು ವರ್ಷದಿಂದ ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಚಲನವಲನಗಳನ್ನು ಗಮನಿಸಿ ಅಶ್ಲೀಲ ಸಂಜ್ಞೆಗಳನ್ನು ಮಾಡುತ್ತಿದ್ದ. ಯಾಕೆ ಎಂದು ವಿಚಾರಿಸಿದರೆ ಅವಾಚ್ಯ, ಅಶ್ಲೀಲ ಸಂಜ್ಞೆಗಳನ್ನು ಮಾಡುವ ಮೂಲಕ ಲೈಂಗಿಕ ಕಿರುಕುಳ, ಮಾನಹಾನಿಯುಂಟು ಮಾಡುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮತ್ತು ಅವಮಾನಕರ ಪೋಸ್ಟ್‌ಗಳನ್ನು ಹಾಕುತ್ತಾನೆ” ಎಂದು ಹೇಳಿದರು.
“ತಾನೊಬ್ಬ ವಕೀಲನೆಂದು ಹೇಳಿಕೊಂಡು ನ್ಯಾಯಾಧೀಶರು, ವಕೀಲರ ಬೆಂಬಲವಿದೆ. ಯಾವ ನ್ಯಾಯಾಧೀಶರು, ಕೋರ್ಟ್ ನನಗೆ ಏನೂ ಮಾಡಲು ಆಗುವುದಿಲ್ಲವೆಂದು ಹೆದರಿಸುತ್ತಾನೆ. ಈತನಿಂದಾಗಿ ರಸ್ತೆಯಲ್ಲಿ ಹೆಣ್ಣುಮಕ್ಕಳು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಮೇಲೆ ಹಲ್ಲೆ ಮಾಡುವುದಾಗಿ ತಿಳಿದುಬಂದಿದೆ. ಇದರಿಂದಾಗಿ ಆತಂಕ ಮತ್ತು ಭಯ ಉಂಟಾಗಿದ್ದು, ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇವೆ. ಮುಂದೆ ನಮಗೇನಾದರೂ ತೊಂದರೆ ಆದಲ್ಲಿ ಅದಕ್ಕೆ ಆತನೇ ನೇರ ಹೊಣೆಯೆಂದು ದೂರು ದಾಖಲಿಸಿದ್ದೇವೆ” ಎಂದರು.
“ಮಹಿಳೆಯರನ್ನು ತುಚ್ಛವಾಗಿ ಹೀಯಾಳಿಸುವ ಮೂಲಕ ಸಂಸಾರ ಹಾಳು ಮಾಡಿ ಕೌಟುಂಬಿಕ ಸಂಘರ್ಷಕ್ಕೆ ಕಾರಣನಾಗುತ್ತಿದ್ದಾನೆ. ಅಸಹ್ಯ ಪದಗಳನ್ನು ಬಳಕೆ ಮಾಡುವುದರಿಂದ ಬೆಳೆದು ನಿಂತ ಮಕ್ಕಳು, ಅಣ್ಣ, ತಮ್ಮಂದಿರು, ಕುಟುಂಬದ ಮುಂದೆ ತಲೆ ಎತ್ತಿ ತಿರುಗಾಡದಂತಾಗಿದೆ. ಫೇಸ್ ಬುಕ್‌ನಲ್ಲಿ ಹಾಕುವ ಕಮೆಂಟ್ ಓದುವುದಕ್ಕೂ ಸಾಧ್ಯವಿಲ್ಲ. ಎತ್ತಿ ಬೆಳೆಸಿದ ಹುಡುಗ ಎಂಬ ಕಾರಣಕ್ಕೆ ಸಹಿಸಿಕೊಂಡು ಬಂದಿದ್ದೇನೆ. ಆತನಿಗೆ ಮಾನಸಿಕ ಸಮಸ್ಯೆ ಇರಬಹುದು. ಇವರ ಹಿಂದೆ ಒಂದು ವ್ಯವಸ್ಥಿತ ಗುಂಪು ಇದೆ” ಎಂದು ಪದ್ಮಜಾ ಜೋಯ್ಸ್ ಹೇಳಿದರು.
ಗಾಯತ್ರಿ ಶೇಷಗಿರಿ ಮಾತನಾಡಿ, “ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಸಹಿಸಲಾಗದೆ ಮನೆಯಲ್ಲಿ ಕಟ್ಟಿಹಾಕುವ ಪ್ರಯತ್ನ ನಡೆಯುತ್ತಿದೆ. ಡ್ರೈವಿಂಗ್ ಶಾಲೆಗೆ ತೆರಳಿದರೆ, ಸಂಘಟನೆಯಲ್ಲಿ ಗುರುತಿಸಿಕೊಂಡರೆ ಅಲ್ಲಿನ ಪುರುಷರೊಂದಿಗೆ ಸಂಬಂಧ ಕಲ್ಪಿಸುತ್ತಾರೆ. ಕಾರಣವಿಲ್ಲದ ಆತ್ಮಹತ್ಯೆ ಪ್ರಕರಣಗಳ ಹಿಂದೆ ಇಂಥವರ ನಿಂದನೆ ಇರುತ್ತದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ‘ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ’ ಹೇಳಿಕೆಗೆ ವ್ಯಾಪಕ ಆಕ್ರೋಶ: ಕ್ಷಮೆ ಕೇಳಿದ ನಟ ಉಪೇಂದ್ರ
“ಐಪಿಸಿ ಕಾಯ್ದೆ 1860 ರಡಿ 354(ಎ), 354(ಡಿ), 506, 504 ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಇಲ್ಲದಿದ್ದರೂ ಅಂತಹವರನ್ನೂ ನಿಂದಿಸುತ್ತಾರೆ. ಇದರ ವಿರುದ್ಧ ರಾಜ್ಯ ಮಹಿಳಾ ಆಯೋಗ, ಬಾರ್ ಕೌನ್ಸಿಲ್, ಹೈಕೋರ್ಟ್‌ಗೆ ದೂರು ಸಲ್ಲಿಸುತ್ತೇವೆ” ಎಂದರು.
ಈ ವೇಳೆ ಎಂ ಜಿ ಗಾಯತ್ರಿ ಶೇಷಗಿರಿ, ಥೆರೇಸಾ ಮ್ಯಾಥ್ಯೂ ಇದ್ದರು.