ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇವರು ಸಂಸದ ಬಿ.ವೈ. ರಾಘವೇಂದ್ರ ಪೋಸ್ಟ್ ಮ್ಯಾನ್ ಸಂಸದ ಎಂದು ಹೇಳಿರುವುದು ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಯ ಪ್ರತೀಕವಾಗಿದೆ. ಇವರ ಹೇಳಿಕೆ ಖಂಡನೀಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್ ಕೆ ಜಗದೀಶ್ ಹೇಳಿದ್ದಾರೆ.
ಸಂಸದ ಬಿ ವೈ ರಾಘವೇಂದ್ರ ಇವರು ಜಿಲ್ಲೆಯ ಅಭಿವೃದ್ಧಿ ಹರಿಕಾರರಾಗಿದ್ದಾರೆ. ವಿಮಾನ ನಿಲ್ದಾಣ, ರಿಂಗ್ ರಸ್ತೆಗಳು. ಮೇಲ್ಲೇತುವೆಗಳು, ಸಿಗಂದೂರು ಚೌಡೇಶ್ವರಿ ಸೇತುವೆ, ರೈಲ್ವೆಗಳ ಅಭಿವೃದ್ಧಿ, ರಸ್ತೆ ಸೇರಿದಂತೆ ಇನ್ನೂ ಅನೇಕ ಮೂಲಭೂತ ಸೌಕರ್ಯಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ನಿಷ್ಠೆ-ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ.
ಇಂತಹ ಜನಪರವಾದ ಕೆಲಸಗಳನ್ನು ನೋಡಿ ಪಾಪ ಸಚಿವ ಮಧು ಬಂಗಾರಪ್ಪನವರಿಗೆ ತಡೆದುಕೊಳ್ಳಲಾಗದೆ ವಿನಾಕಾರಣ ಈ ಸಂಬಂಧ ಹೇಳಿಕೆಗಳನ್ನು ನೀಡುತ್ತಾ ನಾನಿನ್ನು ಜಿಲ್ಲೆಯಲ್ಲಿ ಇದ್ದೇನೆ ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ.
ಸಿಗಂದೂರು ಚೌಡೇಶ್ವರಿ ಸೇತುವೆ ಉದ್ಘಾಟನೆಗೆ ಮೊದಲೇ ಕೇಂದ್ರ ಭೂಸಾರಿಗೆ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದರೂ ಸಹ ರಾಜಕೀಯ ಕಾರಣಗಳಿಗಾಗಿ ಉದ್ಘಾಟನೆಗೆ ಬರದಿರುವುದು ಅವರ ಹದಪತನ ತೋರಿಸುತ್ತದೆ. ಇದರ ಹಿಂದೆ ಸಚಿವ ಮಧು ಬಂಗಾರಪ್ಪನವರ ಕೀಳು ರಾಜಕೀಯ ವರ್ತನೆ ಕೆಲಸ ಮಾಡಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಗ್ಯಾರಂಟಿಗೆ ಹಣ ಹೊಂದಿಸಲು ಸಣ್ಣಪುಟ್ಟ ಕ್ಯಾಂಟೀನ್, ಗೂಡಂಗಡಿ, ತರಕಾರಿ ಅಂಗಡಿಗಳವರೆಗೆ ಜಿಎಸ್‌ಟಿ ಟ್ಯಾಕ್ಸ್ ಕಟ್ಟಲು ನೋಟಿಸ್ ನೀಡಿದೆ. ಇದು ಕೇಂದ್ರ ಸರ್ಕಾರದ ನಿರ್ಧಾರವಲ್ಲ, ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯಾಗಿದೆ ಇದು ಗೊತ್ತಿದ್ದರೂ ಜನರ ಧಿಕ್ಕು ತಪ್ಪಿಸಲು ಕೇಂದ್ರ ಸರ್ಕಾರದ ಮೇಲೆ ಗೂಬೆಕೂರಿಸಲು ಹೊರಟಿದ್ದಾರೆ ಇದು ಖಂಡನೀಯ ಎಂದಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಕಳಿಸಿರುವ ನೋಟಿಸ್‌ಗಳನ್ನು ಕೂಡಲೇ ವಾಪಸ್ ಪಡೆಯಬೇಕು ಇಲ್ಲವಾದರೆ ಬಿಜೆಪಿಯಿಂದ ಹೋರಾಟ ನಡೆಸಲಾಗುವುದೆಂದು ಜಿಲ್ಲಾಧ್ಯಕ್ಷ ಎನ್. ಕೆ. ಜಗದೀಶ್ ಪತ್ರಿಕೆ ಹೇಳಿಕೆ ನೀಡಿದ್ದಾರೆ.