ಹಳ್ಳಿಗಾಡು ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ತಲೆ ದೂರಿದೆ. ಹದಿನೈದು ವರ್ಷದ ಆಡಳಿತದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಏನು ಮಾಡುತ್ತಿದ್ದರು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಗೀತಾ ಶಿವರಾಜ್‌ಕುಮಾರ್ ಪರ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ನಗರ ವ್ಯಾಪ್ತಿ ಹೊರತು ಪಡಿಸಿದರೆ, ಗ್ರಾಮಾಂತರ ಪ್ರದೇಶಗಳಾದ ನಗರ, ಸಂಪೆಕಟ್ಟೆ, ಕರಿಮನೆ, ಅರಮನೆಕೊಪ್ಪ, ಮತ್ತಿಮನೆ ವ್ಯಾಪ್ತಿ ನೆಟ್ವರ್ಕ್ ಹುಡುಕಲೆಂದೇ ಜನರು ಸಮಯ ಮೀಸಲಿಡಬೇಕು. ಇದರಿಂದ, ಮಕ್ಕಳ ವಿದ್ಯಭ್ಯಾಸದ ಜತೆಗೆ ತುರ್ತುಪರಿಸ್ಥಿತಿಯಲ್ಲಿ ತೊಡಕಾಗಿದೆ ಎಂದು ದೂರಿದರು.
ಲೋಕಸಭಾ ಚುನಾವಣೆ ದಿನಾಂಕ ಪ್ರಕಟಗೊಳ್ಳುವ ಒಂದು ತಿಂಗಳ ಹಿಂದೆ ನೆಟ್ವರ್ಕ್ ಸಮಸ್ಯೆ ಪರಿಹರಿಸಲು ಯೋಜನೆ ರೂಪಿಸಲಾಗಿದೆ ಎಂದು ಬಿಜೆಪಿಯ ಸ್ಥಳೀಯ ಸಂಸದ ಬಿ.ವೈ.ರಾಘವೇಂದ್ರ ಜನರ ಮುಂದೆ ಸುಳ್ಳು ಭರವಸೆ ನೀಡಿದ್ದರು. ಇದು ಕೇವಲ ಚುನಾವಣೆಯ ಗಿಮಿಕ್ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಸ್ಥಳೀಯ ಸಮಸ್ಯೆಗಳು ಪರಿಹಾರಗೊಳ್ಳಬೇಕು ಎಂದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಬುಡ ಸಮೇತ ಕೀಳಬೇಕಿದೆ. ಅದೇ ಕಾರಣಕ್ಕೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಜನಪರ ಆಡಳಿತ ನಡೆಸಲು ಅವಕಾಶ ಕಲ್ಪಿಸಿಕೊಡಿ. ಕೇಂದ್ರದ ಹಂತದಲ್ಲಿ ಪರಿಹರಿಸಬಹುದಾದ ಸ್ಥಳೀಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚು ಆದ್ಯತೆ ನೀಡಲಿದೆ. ಅದಕ್ಕೆ, ಉದಾಹರಣೆ ಈಗಾಗಲೇ ಕಡುಬಡವರಿಗೆ ನೆರವಾಗಲು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಅದೇ ರೀತಿ, ಇಲ್ಲಿ ಮಳೆಗಾಲದ ಸಂದರ್ಭದಲ್ಲಿ ಜನ ಸಾಮಾನ್ಯರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ ಡನ್ನುವುದು ಗಮನದಲ್ಲಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕೇಂದ್ರದ ಹಂತದಲ್ಲಿ ಶ್ರಮಿಸುತ್ತೇನೆ ಎಂದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಜನರ ಮೇಲೆ ತೆರಿಗೆ ವಿಧಿಸುವುದರಲ್ಲಿಯೇ, ಆಡಳಿತದ ಕೊನೆಯ ಹಂತಕ್ಕೆ ಬಂದರು. ರಾಜ್ಯದಲ್ಲಿ ರೈತರು ಕೃಷಿಗೆ ಬಳಸುವ ರಾಸಾಯನಿಕ ಗೊಬ್ಬರದ ಬೆಲೆ ಗಗನಕ್ಕೇರಿಸಿದರು. ಇದು ಬಿಜೆಪಿಯ ಸಾಧನೆ ಎಂದರು.
ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಬಗರ್ ಹುಕುಂ ಹಾಗೂ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಅದಕ್ಕೆ ಶಕ್ತಿ ತುಂಬಲು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಬೇಕು ಎಂದರು.
ನಟ ಶಿವರಾಜ್‌ಕುಮಾರ್ ಮಾತನಾಡಿ, ಗೀತಾ ಅವರಿಗೆ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಇದೆ. ಹಣ ಮಾಡುವ ಉದ್ದೇಶಕ್ಕೆ ಗೀತಾ ರಾಜಕೀಯ ಕಣಕ್ಕರ ಇಳಿದಿಲ್ಲ. ಇಲ್ಲಿ, ಜನ ಸಾಮಾನ್ಯರ ಸಮಸ್ಯೆಗಳು ಪರಿಹಾರ ಆಗಬೇಕು. ಅದೇ ರೀತಿ, ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರು ನಡೆಸಿದ ಉನ್ನತ ಕಾರ್ಯಗಳಿಗೆ ಮುಂದಿನ ದಿನದಲ್ಲಿ ಗೀತಾ ಅವರು ಜೀವ ತುಂಬಲಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.
ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಸಂಪೆಕಟ್ಟೆ, ಅರಮನೆಕೊಪ್ಪ, ಕರಿಮನೆ, ಅಂಡಗದೋದೂರು, ಮಾಸ್ತಿಕಟ್ಟೆ, ಯಡೂರು, ಸುಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ, ಚುನಾವಣಾ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ, ಜಯಶೀಲ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ವಿದ್ಯಾಧರ ಗುರುಶಕ್ತಿ, ಮಂಜಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಅಮರ ನಾಥ ಶೆಟ್ಟಿ, ನಾಗೋಡು ವಿಶ್ವನಾಥ, ನಾಗೇಂದ್ರ ಜೋಗಿ ಇದ್ದರು.
