ಮುಸ್ಲಿಂ ಯುವಕನೊಬ್ಬ ತನ್ನ ಮೊಬೈಲ್ ಅಂಗಡಿಯಲ್ಲಿ ಲಕ್ಷ್ಮೀ ಪೂಜೆ ಮಾಡಿಸಿ, ಸೌಹಾರ್ದತೆ ಮೆರೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸ ನಗರ ತಾಲೂಕಿನಲ್ಲಿ ನಡೆದಿದೆ.
ಮೂರು ದಿನಗಳಿಂದ ದೀಪಾವಳಿ ಹಬ್ಬವನ್ನು ಎಲ್ಲಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ಭಾಗವಾಗಿ ತಾಲೂಕಿನ ರಿಪ್ಪನಪೇಟೆ ಗ್ರಾಮದಲ್ಲಿ ತನ್ವೀರ್ ಎಂಬವರು ತಮ್ಮ ಅಂಗಡಿಯಲ್ಲಿ ಹಿಂದು ಪೂಜಾರಿಯನ್ನು ಕರೆಸಿ ಲಕ್ಷ್ಮೀ ಪೂಜೆ ಮಾಡಿದ್ದಾರೆ.
ತನ್ವೀರ್ ಅವರು ಅರಸಾಳು ಗ್ರಾಮದವರಾಗಿದ್ದು, ರಿಪ್ಪನಪೇಟೆಯಲ್ಲಿ ‘ತನ್ವಿ ಮೊಬೈಲ್ ವರ್ಲ್ಡ್’ ಎಂಬ ಅಂಗಡಿ ನಡೆಸುತ್ತಿದ್ದಾರೆ. ಅವರು ಈ ವರ್ಷ ಮಾತ್ರವಲ್ಲದೆ, ಪ್ರತಿ ವರ್ಷವೂ ತಮ್ಮ ಅಂಗಡಿಯಲ್ಲಿ ಲಕ್ಷ್ಮೀ ಪೂಜೆ ಮಾಡಿಸುತ್ತಾರೆ. ಜೊತೆಗೆ ಮುಸ್ಲಿಂ ಧರ್ಮಗುರುಗಳಿಂದಲೂ ಪ್ರಾರ್ಥನೆ ಸಲ್ಲಿಸುತ್ತಾರೆ. ಹಿಂದು-ಮುಸ್ಲಿಂ ಎರಡೂ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಭಾವೈಕ್ಯತೆ ಸಾರುತ್ತಿದ್ದಾರೆ.
“ನಾನು ಜಾತ್ಯಾತೀತತೆಯನ್ನು ಬೆಂಬಲಿಸುತ್ತೇನೆ. ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಹೋಗುತ್ತೇನೆ. ಎಲ್ಲ ಧರ್ಮವನ್ನು ಪೂಜಿಸುತ್ತೇನೆ. ಪೂಜೆಯಲ್ಲಿ ನಮ್ಮ ಕುಟುಂಬದವರು, ಸ್ನೇಹಿತರೂ ಕೂಡ ಭಾಗಿಯಾಗುತ್ತಾರೆ” ಎಂದು ತನ್ವೀರ್ ಹೇಳಿದ್ದಾರೆ.