ಒಬ್ಬ ವ್ಯಕ್ತಿ ರಕ್ತ ಕೊಡುವುದರಿಂದ 4 ವ್ಯಕ್ತಿಗಳ ಜೀವ ಉಳಿಸಬಹುದು. ಆದ್ದರಿಂದ ಜನರು ರಕ್ತದಾನ ಮಾಡಿ ಪ್ರಾಣ ಉಳಿಸಲು ನೆರವಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನಾಯಕ ಹೆಚ್.ಆರ್ ಬಸವರಾಜಪ್ಪ ಹೇಳಿದ್ದರೆ.
ಶಿವಮೊಗ್ಗದಲ್ಲಿ ಆಯೋಜಿಸಿದ್ದ ರೈತ ನಾಯಕ ಎನ್.ಡಿ ಸುಂದರೇಶ್ ಅವರ 31ನೇ ವರ್ಷದ ಸ್ಮರಣಾ ಕಾರ್ಯಕ್ರಮ ಮತ್ತು ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. “ರೈತರಿಗೆ, ಕೃಷಿಕಾರ್ಮಿಕರಿಗೆ, ಮಹಿಳೆಯರಿಗೆ, ಜನಸಾಮಾನ್ಯರಿಗೆ ಆಗುತ್ತಿದ್ದ ಅನ್ಯಾಯ, ಅಸಮಾನತೆ, ಅಗೌರವ, ಶೋಷಣೆಗಳ ವಿರುದ್ಧ ರೈತರನ್ನು, ಕೃಷಿಕಾರ್ಮಿಕರನ್ನು, ಮಹಿಳೆಯರನ್ನು, ಯುವಕರನ್ನು ಸಂಘಟಿಸಿದವರಲ್ಲಿ ಸುಂದರೇಶ್ ಪ್ರಮುಖರು. ಅವರು ಕರ್ನಾಟಕದ ಹಳ್ಳಿಗಳ ಮೂಲೆಮೂಲೆಗೆ ತಿರುಗಾಡಿ ಜನರಲ್ಲಿ ಹೋರಾಟದ ಮನೋಭಾವವನ್ನು ಬಿತ್ತಿ, 13 ವರ್ಷಗಳ ಕಾಲ ಜನರಿಗಾಗಿ ಹೋರಾಟ ಮಾಡಿದ್ದರು” ಎಂದು ತಿಳಿಸಿದ್ದಾರೆ.
“ಹಳ್ಳಿಯ ಸಂಸ್ಕೃತಿಯನ್ನು ಉಳಿಸಿ ಪ್ರಾಮಾಣಿಕತೆ, ನೈತಿಕತೆ ಬೆಳೆಸಬೇಕಾಗಿದೆ. ಸ್ವಾಭಿಮಾನ, ಸ್ವಯಂ ಮರ್ಯಾದೆ, ಆತ್ಮ ಗೌರವವನ್ನು ಕಾಪಾಡಿಕೊಳ್ಳಬೇಕಾದರೆ ಸಮಾನತೆಯನ್ನು ಸಾಧಿಸಬೇಕಾಗಿದೆ. ರೈತ ಕುಲದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದಕ್ಕಾಗಿ ನಾವೆಲ್ಲರೂ ನಮ್ಮ ಹಿರಿಯರು ನಮಗೆ ಹಾಕಿ ಕೊಟ್ಟ ಶಿಸ್ತು, ಪ್ರಾಮಾಣಿಕತೆ, ವೈಚಾರಿಕ ವಿಚಾರಗಳ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಬಲಪಡಿಸಲು ನಾವೆಲ್ಲರೂ ಪಣತೊಡಬೇಕಾಗಿದೆ” ಎಂದರು.
“2014ರಿಂದಲೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಸರ್ಕಾರ ಆಕ್ರಮಣಕಾರಿಯಾಗಿ ರೂಪಿಸುತ್ತಿರುವ ಕಾರ್ಪೋರೇಟ್ ಬಂಡವಾಳಪರ ನವ ಉದಾರವಾದಿ ನೀತಿಗಳು ದೇಶದ ದುಡಿಯುವ ಜನರನ್ನು ಸಂಕಷ್ಟಕ್ಕೆ ದೂಡಿದೆ. ಕಾರ್ಪೊರೇಟ್ ತೆರಿಗೆಗಳನ್ನು ಕಡಿತ ಮಾಡುತ್ತಿರುವ ಕೇಂದ್ರ ಸರ್ಕಾರ, ಸಾಮಾನ್ಯ ಜನರ ಮೇಲೆ ಜಿ.ಎಸ್.ಟಿ ಹೊರೆ ವಿಧಿಸಿದೆ. ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಬಹುತೇಕ ಸಾರ್ವಜನಿಕ ಸೇವೆಗಳ ಬಳಕೆಗೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದರಿಂದ ಎಲ್ಲಾ ಅಗತ್ಯ ಸರಕುಗಳ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, ಜನತೆ ತತ್ತರಿಸುವಂತಾಗಿದೆ” ಎಂದು ತಿಳಿಸಿದರು.
“ದೆಹಲಿಯಲ್ಲಿ ಸತತ 13 ತಿಂಗಳ ಕಾಲ ರೈತರು ಐತಿಹಾಸಿಕ ಹೋರಾಟ ನಡೆಸಿದ ಪರಿಣಾಮ ಮೋದಿ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆಯಿತು. ಅದರೂ ಕನಿಷ್ಟ ಬೆಂಬಲ ಬೆಲೆ (ಎಂ.ಎಸ್.ಪಿ) ಕಾಯ್ದೆ ಜಾರಿ, ವಿದ್ಯುತ್ ದ್ಯುತ್ ತಿದ್ದುಪಡಿ ಮಸೂದೆ ರದ್ದತಿ ಮುಂತಾದ ವಿಷಯಗಳಲ್ಲಿ ರೈತರಿಗೆ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಈ ಧೋರಣೆಗಳು ರೈತಾಪಿ ವರ್ಗವನ್ನು ಸಾಲದ ಸುಳಿಗೆ ಸಿಲುಕಿಸಿ ಕೃಷಿಯಿಂದ ಹೊರ ದೂಡಲಾಗುತ್ತಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಕೃಷಿ ಆರ್ಥಿಕತೆ ಬಿಕ್ಕಟ್ಟಿನಲ್ಲಿ ಸಾಗುತ್ತಿದೆ” ಎಂದು ಹೇಳಿದರು.
“ಅದೇ ರೀತಿ ರಾಜ್ಯ ಸರ್ಕಾರ ಕೂಡಲೇ ಈ ಹಿಂದಿನ ಬಿಜೆಪಿ ಸರ್ಕಾರ ತಂದಿದ್ದ ರೈತ ವಿರೋಧಿ, ಜನ ವಿರೋಧಿ ನೀತಿಗಳನ್ನ ರದ್ದುಗೊಳಿಸಬೇಕು. ಮಹಾಧರಣಿಯ ಸಂಧರ್ಭದಲ್ಲಿ ರೈತರ, ಕಾರ್ಮಿಕರ, ದುಡಿಯುವ ವರ್ಗದ ಜನರ ಕೇಂದ್ರ ಸರ್ಕಾರದ ಹಕ್ಕೋತ್ತಾಯಗಳನ್ನು ರಾಜಭವನಕ್ಕೆ, ರಾಜ್ಯ ಸರ್ಕಾರದ ಹಕ್ಕೋತ್ತಾಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಕಳುಹಿಸಿಕೊಡಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ವೇಳೆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ಹಿಂಪಡೆಯುತ್ತೇವೆ ಎಂದು ಹೇಳಿತ್ತು. ಆದರೆ, ಇನ್ನೂ ಕಾಯ್ದೆಯನ್ನು ಹಿಂಪಡೆದಿಲ್ಲ. ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ರೂಪಿಸಬೇಕಾಗಿದೆ” ಎಂದು ಹೇಳಿದರು.
ರೈತ ಸಂಘವು ರಾಜ್ಯ ಸರ್ಕಾರದ ಮುಂದಿಟ್ಟಿರುವ ಹಕ್ಕೊತ್ತಾಯಗಳು:
1) ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನ ತಕ್ಷಣವೇ ವಾಪಾಸ್ಸು ಪಡೆಯಬೇಕು.
2) ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ಕಾಂಗ್ರೆಸ್ ಹೇಳಿತ್ತು. ಅದರಂತೆ, ರಾಜ್ಯ ಸರ್ಕಾರವು ವಿದ್ಯುತ್ ಖಾಸಗೀಕರಣ ವಿರುದ್ಧ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಬೇಕು ಮತ್ತು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು.
3) 2023 ಸೆಪ್ಟೆಂಬರ್ 22ರಂದು ಆದೇಶ ಹೊರಡಿಸಿ ರೈತರ IP ಸೆಟ್‌ಗಳಿಗೆ ರೈತರೇ ರೈತರ ಸ್ವಯಂ ವೆಚ್ಚದಲ್ಲಿ ಕಂಬ, ತಂತಿ, ಟಿ.ಸಿಗಳನ್ನ ಹಾಕಿಸಿಕೊಳ್ಳಬೇಕೆಂಬ ಆದೇಶವನ್ನು ಕೂಡಲೇ ಹಿಂಪಡೆಯಬೇಕು.
4) ಕರ್ನಾಟಕ ರಾಜ್ಯ ಸಂಪೂರ್ಣ ಬರಗಾಲವೆಂದು ಘೋಷಣೆಯಾಗಿದ್ದು ತತಕ್ಷಣದಿಂದ ರೈತರಿಗೆ ಎಕರೆಗೆ 20 ಸಾವಿರ ರೂಪಾಯಿ ಸಹಾಯಧನ ಕೊಡಬೇಕು ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು.
5) ಬರಗಾಲ ಸಂದರ್ಭಲ್ಲಿ ಪಹಣಿ, ಮ್ಯುಟೇಷನ್, ಹದ್ದುಬಸ್ಸು, ವರಮಾನ ಪ್ರಮಾಣ ಪತ್ರ, ಜಾತಿ ಪ್ರಮಾಣಪತ್ರ ಇತರೆ ಪ್ರಮಾಣ ಪತ್ರಗಳಿಗೆ
ಹಿಂದಿಗಿಂತ 3ರಷ್ಟು ದುಬಾರಿ ಶುಲ್ಕವನ್ನು ವಿಧಿಸಿರುವುದನ್ನು ತಕ್ಷಣವೇ ಕಡಿಮೆ ಮಾಡಬೇಕು. 6) ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ರಾಜ್ಯ ಸರ್ಕಾರದ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಬೇಕು.
7) ಬಸವ, ಅಂಬೇಡ್ಕರ್ ವಸತಿ ಯೋಜನೆ ಅಡಿ ಕೊಡುತ್ತಿರುವ ಲಕ್ಷ 20ಸಾವಿರ ರೂ.ಗಳನ್ನ 5ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು. ಮನೆ ಇಲ್ಲದ
ಪ್ರತಿಯೊಬ್ಬರಿಗೂ ಮನೆ ಮಂಜೂರು ಮಾಡಬೇಕು. ನಿವೇಶನ ಇಲ್ಲದವರಿಗೆ ನಿವೇಶನ ಕೊಡಬೇಕು.
8) ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕುರುವ ಗಣೇಶ್, ಡಾ. ಬಿ.ಎಂ ಚಿಕ್ಕಸ್ವಾಮಿ, ಕಡಿದಾಳ್ ಶಾಮಣ್ಣ, ದ್ದವೀರಪ್ಪ, ಅಬ್ಬಣಿ ಶಿವಪ್ಪ, ಡಾ. ಬಿ.ಎಂ ಚಿಕ್ಕಸ್ವಾಮಿ, ಕಡಿದಾಳ್ ಶಾಮಣ್ಣ, ಹೊನ್ನೂರು ಮುನಿಯಪ್ಪ, ತರೀಕೆರೆ ಮಹೇಶ್, ಹಿಟ್ಟೂರು ರಾಜು, ಟಿ.ಎಂ ಚಂದ್ರಪ್ಪ, ಸುಭಾಷ್ ಸಿರಬೂರು, ವೈಜೇಗೌಡ ಕೋಲಾರ, ನಿಂಗಪ್ಪ ದಿವಟಗಿ, ಚಿಕ್ಕಬ್ಬಿಗೆರೆ ನಾಗರಾಜ್, ಕೊಟ್ಟೂರು ಭರ್ಮಣ್ಣ, ನಜೀರ್ ಸಾಬ್ ಮೂಲಿಮನಿ, ಅಮೀನ್ ಪಾಷ ದಿದ್ದಿ, ಮಲ್ಲಿಕಾರ್ಜುನ್ ರಾಮದುರ್ಗಾ, ಗಂಗಾಧರ್ ಮೇಠಿ, ಸುಭಾಷ್ ಐಕೂರು, ದುಗ್ಗಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.