ಆಹಾರ ಮತ್ತು ಕೃಷಿಯಲ್ಲಿ ಕುಲಾಂತರಿ ತಂತ್ರಜ್ಞಾನ ಅಪಾಯಕಾರಿ ಮಾತ್ರವಲ್ಲ, ಹಳಸಲು ತಂತ್ರಜ್ಞಾನ ಎನ್ನುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕೃಷಿಯಲ್ಲಿ ಕುಲಾಂತರಿ ಉಚ್ಚಾಟನೆ ಮಾಡಬೇಕು, ಕುಲಾಂತರಿ ಬೆಳೆಗಳಿಗೆ ಸಂಬಂಧಿಸಿ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಕೆ ಟಿ ಗಂಗಾಧರ್, ಕುಲಾಂತರಿ ತಂತ್ರಜ್ಞಾನ ಅಪಾಯಕಾರಿ. ಬಿಟಿ ಬದನೆ ಪ್ರಕರಣದಲ್ಲಿ ನಡೆದಂತೆ ವ್ಯಾಪಕ ಮತ್ತು ಅರ್ಥಪೂರ್ಣ ಚರ್ಚೆಗಳು ಎಲ್ಲ ನಾಗರಿಕರಿಗೂ ಮುಕ್ತವಾಗಿರಬೇಕು. ಜಿಲ್ಲಾ ಮಟ್ಟದಲ್ಲಿ ಚರ್ಚೆಗಳನ್ನು ನಡೆಸಬೇಕು. ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಹಕ್ಕುಬಾಧ್ಯಸ್ತರು ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡಿರಬೇಕು ಎಂಬುದು ನಮ್ಮ ಹಕ್ಕೊತ್ತಾಯ ಎಂದರು.
ಕೃಷಿ ವಲಯಕ್ಕೆ ಸಂಬಂಧಿಸಿದ ನೀತಿಗಳನ್ನು ನಿರೂಪಿಸುವಾಗ ರೈತ ಪ್ರತಿನಿಧಿಗಳ ನಡುವೆ ಸಮಾಲೋಚನೆಗಳು ನಡೆಯದೆ ಇರುವ ಹಿನ್ನೆಲೆಯಲ್ಲಿ ಕುಲಾಂತರಿ ಅಥವಾ ಕೃಷಿಯಲ್ಲಿ ಜೈವಿಕ ತಂತ್ರಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುವ ಸಮಾಲೋಚನಾ ಸಭೆಗಳು ಹೆಚ್ಚಿನ ಮಹತ್ವ ಪಡೆಯುತ್ತವೆ. ಕೃಷಿಯಲ್ಲಿ ಕುಲಾಂತರಿ ತಂತ್ರಜ್ಞಾನ ತರುವ ಬಗ್ಗೆ ರಾಷ್ಟ್ರೀಯ ಜೈವಿಕ ಸುರಕ್ಷತಾ ನೀತಿ ರಚಿಸಿ ಸಾರ್ವಜನಿಕ ಸಮಾಲೋಚನೆ ನಡೆಸಬೇಕು. ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ನೇತೃತ್ವದಲ್ಲಿ ರಾಜ್ಯ ಸರ್ಕಾರ, ರೈತ ಪ್ರತಿನಿಧಿಗಳು, ಪರಿಸರವಾದಿಗಳೊಂದಿಗೆ ಚರ್ಚಿಸಿ ಭಾರತದ ಕೃಷಿಯಲ್ಲಿ ಕುಲಾಂತರಿ ತಂತ್ರಜ್ಞಾನ ಅಗತ್ಯದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಕಾಯ್ದೆ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ ಎಂದು ಹೇಳಿದರು.

ಆಹಾರ ಪದ್ಧತಿ ಹಾಗೂ ಕೃಷಿಯಲ್ಲಿ ಕುಲಾಂತರಿ ತಂತ್ರಜ್ಞಾನ ತರಬೇಕೆಂದು ಕೆಲ ಬಂಡವಾಳಶಾಹಿಗಳು ಹುನ್ನಾರ ನಡೆಸುತ್ತಿದ್ದಾರೆ. ಕುಲಾಂತರಿ ತಂತ್ರಜ್ಞಾನ ಎನ್ನುವುದು ಪ್ರಾಣಿ- ಪಕ್ಷಿಗಳ ಜೀವಸತ್ವ ಹೊರತೆಗೆದು ಸಸ್ಯಗಳ ಮೇಲೆ ಪ್ರಯೋಗ ಮಾಡುವ ಪಿತೂರಿ. ಇದಕ್ಕೆ ಜಾಗತಿಕವಾಗಿ ಮುಂದುವರಿದ ದೇಶಗಳು ವಿರೋಧ ವ್ಯಕ್ತಪಡಿಸಿವೆ. ಕುಲಾಂತರಿ ತಂತ್ರಜ್ಞಾನ ಪದ್ಧತಿಯ ಆಹಾರ ಸೇವನೆಯಿಂದ ಮನುಷ್ಯ ಹಾಗೂ ಜೀವಸಂಕುಲದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಪರಿಸರದ ಅವನತಿಯೂ ಆಗಲಿದೆ. ಆದ್ದರಿಂದ ಈ ಪದ್ಧತಿ ತಿರಸ್ಕರಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕೆ ಟಿ ಗಂಗಾಧರ್ ತಿಳಿಸಿದರು.
ಇದನ್ನು ಓದಿದ್ದೀರಾ? ರಾಜ್ಯ ರಾಜಕಾರಣದಲ್ಲಿ BJP-RCB (ರಾಯಣ್ಣ ಚೆನ್ನಮ್ಮ ಬ್ರಿಗೇಡ್) ಹೊಸ ಆಟ!
ಪ್ರತಿಭಟನೆಯ ಬಳಿಕ ರೈತರ ಮನವಿಯನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೂಲಕ ನೀಡಲಾಯಿತು.
ಪ್ರತಿಭಟನೆಯಲ್ಲಿ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಗಿರೀಶ್ ಮಾಳೇನಹಳ್ಳಿ, ಜಗದೀಶ್ ನಾಯಕ್, ಮಂಜುನಾಥ್, ಹಾಲೇಶಪ್ಪ ಗೌಡ್ರು, ಈರಣ್ಯ ಪ್ಯಾಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
