ಮಾಜಿ ಡಿಸಿಎಂ ಹಾಗೂ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ ಎಸ್ ಈಶ್ವರಪ್ಪ ವಿರುದ್ಧ ಶಿವಮೊಗ್ಗದಲ್ಲಿ ಮತ್ತೊಂದು ಸುಮೋಟೊ ಕೇಸ್ ದಾಖಲಾಗಿದೆ.
ಪ್ರಚೋದನಾಕಾರಿ ಭಾಷಣ ಹಾಗೂ ಅನ್ಯಧರ್ಮದ ವಿರುದ್ಧ ಕೋಮು ಭಾವನೆ ಕೆರಳಿಸಲು ಪ್ರೇರಣೆ ನೀಡಿದ್ದಾರೆಂಬ ಕಾರಣಕ್ಕೆ ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದಾರೆ.
ಕೋಟೆ ಪೊಲೀಸ ಠಾಣೆ ಇನ್‌ಸ್ಪೆಕ್ಟರ್ ಹರೀಶ್ ಕೆ ಪಟೇಲ್ ನೀಡಿದ ದೂರಿನ ಮೇರೆಗೆ ಈಶ್ವರಪ್ಪ ವಿರುದ್ಧ ಕೋಟೆ ಠಾಣೆಯಲ್ಲಿ ಬಿಎನ್‌ಎಸ್, 2023(u/s-196(1), 299 ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂ ಸಂತರ ಬಂಧನ ಹಾಗೂ ಹಿಂದೂಗಳ ಮೇಲಿನ ಹಲ್ಲೆ ಖಂಡಿಸಿ, ಹಿಂದೂ ರಕ್ಷಣಾ ಸಮಿತಿ, ವಿಶ್ವ ಹಿಂದೂ ಪರಿಷತ್‌ನಿಂದ ಡಿಸೆಂಬರ್ 3ರಂದು ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದ್ದ ಈಶ್ವರಪ್ಪ, ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆಂದು ಪೊಲೀಸರು ಸುಮೋಟೊ ಕೇಸ್ ದಾಖಲಿಸಿದ್ದಾರೆ.
“ಮುಸಲ್ಮಾನರು ಅನ್ನ ಹಾಕಿದ ಮನೆಗೆ ಕನ್ನ ಹಾಕುವ ರಕ್ತದವರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತದಲ್ಲಿರುವ ಹಿಂದೂಗಳು ಈ ದೇಶದಲ್ಲಿನ ಮುಸಲ್ಮಾನರಿಗೆ ಸಿಕ್ಕ ಸಿಕ್ಕಲ್ಲಿ, ಸಿಕ್ಕಿದ್ದನ್ನು ತೆಗೆದುಕೊಂಡು ಹೊಡೆಯಲು ಶುರು ಮಾಡಿದರೆ ಮುಸಲ್ಮಾನರು ಉಳಿಯುತ್ತಾರ?” ಎಂದು ಈಶ್ವರಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಕೋಮು ಪ್ರಚೋದನೆ ಜತೆಗೆ ಅನ್ಯಕೋಮಿನ ವಿರುದ್ಧ ದ್ವೇಷ ಭಾವನೆ ಹಾಗೂ ಅಸೌಹಾರ್ದತೆ ಸೃಷ್ಟಿಸಲು ಯತ್ನಿಸಿದ್ದಾರೆಂದು ಆರೋಪಿಸಿ ಪೊಲೀಸರು ಸುಮೋಟೊ ದಾಖಲಿಸಿಕೊಂಡಿದ್ದಾರೆ.
ಕಳೆದ 20 ದಿನಗಳ ಹಿಂದೆಯಷ್ಟೇ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ವಕ್ಫ್ ವಿಚಾರದಲ್ಲಿ ಈಶ್ವರಪ್ಪ ಅವರು ಮಾತನಾಡಿದ್ದಕ್ಕೆ ಜಯನಗರ ಇನ್‌ಸ್ಪೆಕ್ಟರ್ ನೀಡಿದ ದೂರಿನ ಮೇರೆಗೆ ಮೊದಲ ಸುಮೋಟೊ ಕೇಸ್ ದಾಖಲಾಗಿತ್ತು.
ಮಾಜಿ ಡಿಸಿಎಂ ಈಶ್ವರಪ್ಪನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಎಸ್‌ಡಿಪಿಐ ಆಗ್ರಹ
ಶಿವಮೊಗ್ಗದಲ್ಲಿ ಪದೇ ಪದೆ ಕೋಮು ಪ್ರಚೋದನಕಾರಿ ಭಾಷಣ ಮಾಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಮಾಜಿ ಡಿಸಿಎಂ ಈಶ್ವರಪ್ಪನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಎಸ್‌ಡಿಪಿಐ ಕೂಡಾ ಆಗ್ರಹಿಸಿತ್ತು.
“ಶಿವಮೊಗ್ಗದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಶಾಂತಿಯುತವಾಗಿರುವ ನಗರದ ಸ್ವಾಸ್ಥ್ಯ ಹಾಳು ಮಾಡಲು ಹೊರಟಿರುವ ಮಾಜಿ ಡಿಸಿಎಂ ಈಶ್ವರಪ್ಪಗೆ ಕಾನೂನು ಪಾಠ ಕಲಿಸುವುದು ಯಾವಾಗ?” ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸಾಕ್ ಆಗ್ರಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಇಂಟರ್‌ನೆಟ್ ಮಾಹಿತಿಗಳ ಓದೇ ಅಂತಿಮವಲ್ಲ: ಡಾ. ಕಾಂತೇಶರೆಡ್ಡಿ ಗೋಡಿಹಾಳ
“ಇದೇ ರೀತಿಯ ಕೋಮು ದ್ವೇಷ ಹರಡಿಸುವ ಪ್ರಚೋದನಕಾರಿ ಹೇಳಿಕೆ ಭಾಷಣಗಳಿಂದ ಶಾಂತಿ ಬಯಸುವ ನಾಗರಿಕರಲ್ಲಿ ಅಶಾಂತಿ ಮೂಡಿಸಲು ಈಶ್ವರಪ್ಪನವರು ಯತ್ನಿಸುತ್ತಿದ್ದಾರೆ. ಕೋಮು ವಿಷಬೀಜ ಹಾಕಿ ರಾಜಕೀಯ ಲಾಭ ಪಡೆಯುವ ಈಶ್ವರಪ್ಪರಿಗೆ ಸರಿಯಾದ ಕಾನೂನು ಪಾಠ ಕಲಿಸಬೇಕು. ಅವರು ಅಶಾಂತಿ ಭಾಷಣ ಮಾಡಿದರೂ, ಅವರನ್ನು ಬಂಧಿಸಲು ರಕ್ಷಣಾ ಇಲಾಖೆ ವಿಫಲವಾಗಿರುವುದನ್ನು ಎದ್ದುತೋರುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
“ಪದೇ ಪದೆ ಭಾಷಣಕ್ಕೆ ಅವಕಾಶ ನೀಡುವ ಮೂಲಕ ಪ್ರಚೋದನಾ ಭಾಷಣಗಳಿಗೆ ಅವಕಾಶ ನೀಡಲಾಗಿದೆ. ಸಮಾಜದಲ್ಲಿ ಬಿರುಕು ಉಂಟುಮಾಡುವ ಇಂತಹ ಕೋಮು ದ್ವೇಷ ಹರಡಿಸುವ ಈಶ್ವರಪ್ಪನನ್ನು ಕೂಡಲೇ ಬಂಧಿಸಿ ಶಾಂತಿ ಕಾಪಾಡಬೇಕು” ಎಂದು ಎಸ್‌ಡಿಪಿಐ ಜಿಲ್ಲಾ ಸಮಿತಿ ಪರವಾಗಿ ಇಸಾಕ್ ಆಗ್ರಹಿಸಿದ್ದರು.
