ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಸುನ್ನಿ ಜಾಮಿಯಾ ಮಸೀದಿ ಕಮಿಟಿ ಮತ್ತು ಸುನ್ನಿ ಜಮಾಯತುಲ್ ಉಲ್ಮಾ ಕಮಿಟಿಯ ಸಹಯೋಗದಲ್ಲಿ ಗಾಂಧಿ ಬಜಾರಿನ ಜಾಮಿಯಾ ಮಸೀದಿಯಲ್ಲಿ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್, “ನಮ್ಮ ಹಬ್ಬ ನಮ್ಮ ದೇವರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಮಾಡಬೇಕು. ಆದರೆ, ಕೆಲವೊಂದು ಕಿಡಿಗೇಡಿಗಳಿಂದ ಹಬ್ಬಗಳ ಸಂದರ್ಭದಲ್ಲಿ ಎಲ್ಲರಿಗೂ ತೊಂದರೆಯಾಗುತ್ತದೆ. ಈ ವರ್ಷದಿಂದ ಮಸೀದಿ ಕಮಿಟಿಗಳಿಗೆ ಮೆರವಣಿಗೆ ಜವಾಬ್ದಾರಿ ನೀಡುತ್ತಿದ್ದೇವೆ. ಹಿಂದೂ ಮುಸ್ಲಿಂ ಎರಡೂ ಕಣ್ಣುಗಳು ನಮಗೆ ಮುಖ್ಯ. ಇಲಾಖೆಯ ನಂಬಿಕೆ ಉಳಿಸಿಕೊಂಡು ಭಾರತೀಯ ನಾಗರೀಕರಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.
ಹಬ್ಬಗಳ ಆಚರಣೆ ವಿಭಿನ್ನವಾಗಿರುತ್ತದೆ. ಮೊಹಮ್ಮದ್ ಪೈಗಂಬರರ ಹುಟ್ಟು ಹಬ್ಬ ಆಚರಣೆ ಈದ್ ಮಿಲಾದ್, ಗಣಪತಿ ಹಬ್ಬದ ಆಚರಣೆ ದೇವರನ್ನು ಮೆಚ್ಚಿಸುವ ಹಾಗಿರಲಿ. ಪೈಪೋಟಿಗೆ ಬಿದ್ದು ಹಬ್ಬಗಳ ಆಚರಣೆ ನಡೆಯಬಾರದು ಎಂದು ಕಿವಿಮಾತು ಹೇಳಿದರು.
ನಾಲ್ಕಾರು ಜನ ನೋಡಿ ಹೆಮ್ಮೆ ಪಡುವಂತೆ ಹಬ್ಬಗಳ ಆಚರಣೆ ನಡೆಯಲಿ. ಭಯಮುಕ್ತವಾಗಿ ಹೆಣ್ಣುಮಕ್ಕಳು, ಮಕ್ಕಳು ಹಬ್ಬಗಳಲ್ಲಿ ಪಾಲ್ಗೊಳ್ಳುವಂತಿರಬೇಕು. ಕೆಲ ಕಿಡಿಗೇಡಿಗಳು ಕಾನೂನು ಮೀರಿ ಸಮಸ್ಯೆ ಉಂಟು ಮಾಡುತ್ತಾರೆ ಎಂದರು.
ಏನೇ ಆಚರಣೆ, ಮೆರವಣಿಗೆ ಇದ್ದರೂ ಮುಂಚಿತವಾಗಿ ಮಸೀದಿಯ ಜೊತೆಗೆ, ಪೊಲೀಸ್ ಇಲಾಖೆಯ ಜೊತೆಗೆ ಚರ್ಚೆಗಳು ನಡೆಯಬೇಕು. ಈವರೆಗೆ 277 ಸಭೆಗಳು ಗಣಪತಿ, ಈದ್ ಮಿಲಾದ್ ಸಭೆಗಳನ್ನು ಇಲಾಖೆ ಮಾಡಿದೆ. ಅತ್ಯಂತ ಹೆಚ್ಚಿನ ಸಭೆಗಳು ಆಗಿವೆ. ಒಳ್ಳೆಯ ನಾಗರಿಕರಿಗೆ ರಕ್ಷಣೆ ಕೊಡುವ ಕೆಲಸ ಇಲಾಖೆ ಮಾಡುತ್ತದೆ. ನಂಬಿಕೆ ಇಡಿ. ಹೊರಗಿನ ಜನ ಹೊಗಳೋ ಹಾಗೆ ಹಬ್ಬಗಳನ್ನು ಮಾಡೋಣ ಎಂದು ಮಿಥುನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ‘ಈ ದಿನ’ ಫಲಶೃತಿ | ಚಿಕ್ಕಮಗಳೂರಿನ ಬೆಳಗೋಡು ಅಂಗನವಾಡಿಗೆ ‘ವಿದ್ಯುತ್ ಭಾಗ್ಯ’
ಸಂಭ್ರಮಾಚರಣೆ ಶೋಕಾಚರಣೆ ಆಗುತ್ತಿದೆ. ಭಕ್ತಿ ಬಿಟ್ಟು ತೋರ್ಪಡಿಕೆಯಲ್ಲಿ ಪೈಪೋಟಿ ನಡೆಯುತ್ತಿದೆ. ಕ್ಷುಲ್ಲಕ ಕಾರಣಕ್ಕಾಗಿ ರಾಗಿಗುಡ್ಡ ಘಟನೆ ನಡೆಯಿತು. ಮನೆ ಮಠ ಬಿಟ್ಟು ಓಡೋದೋರು ಇನ್ನೂ ಮನೆಗೆ ಬಾರದ ಸ್ಥಿತಿ ಬೇಕಾ? ಪ್ರಕರಣಗಳು ದಾಖಲಾಗುವಂತಾಯಿತು. ಸಂಭ್ರಮ ಶೋಕವಾಯ್ತು ಎಂದು ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.
ಸಭೆಯಲ್ಲಿ ಅಬ್ದುಲ್ ಸತ್ತಾರ್ ಬೇಗ್, ಕಾರ್ಯದರ್ಶಿ ಏಜಾಜ್ ಪಾಷ, ಮಸೀದಿ ಅಧ್ಯಕ್ಷ ಮುನವರ್ ಪಾಷ, ವಕ್ಫ್ ಬೋರ್ಡ್ ಅಧಿಕಾರಿ ಸೈಯದ್ ಮಹತಾಬ್ ಸರ್ವರ್, ಡಿಎಸ್ ಪಿ ಆಂಜನಪ್ಪ, ಸಿಪಿಐ ರವಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
