ಶಿವಮೊಗ್ಗ ಪತ್ರಿಕಾ ಭವನ ನಿರ್ವಹಣೆ ಮತ್ತು ಮೇಲುಸ್ತುವಾರಿಗೆ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಗೌರವಾನ್ವಿತ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶಿಸಿದ್ದಾರೆ. ಈ ಆದೇಶಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಶಿವಮೊಗ್ಗ ಘಟಕ ಸ್ವಾಗತಿಸಿದೆ.
ನಗರದ ಆರ್‌ಟಿಒ ಕಚೇರಿ ರಸ್ತೆಯಲ್ಲಿರುವ ಪತ್ರಿಕಾ ಭವನಕ್ಕೆ ಜಿಲ್ಲಾಡಳಿತದಿಂದ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಕಾರ್ಯನಿತರ ಪತ್ರಕರ್ತರ ಧ್ವನಿ ಸಂಘಟನೆಯ ಶಿವಮೊಗ್ಗ ಘಟಕದ ವತಿಯಿಂದ ನಡೆಸಿದ ಪ್ರತಿಭಟನೆ ಮತ್ತು ಮನವಿಗಳಿಗೆ ಸ್ಪಂದಿಸಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಈ ವಿಚಾರದಲ್ಲಿ ಸಮಗ್ರ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿದ್ದು, ಜಿಲ್ಲಾಧಿಕಾರಿಗಳ ಆದೇಶಕ್ಕೆ ಸಂಘಟನೆಯು ಮೆಚ್ಚುಗೆ ವ್ಯಕ್ತಪಡಿಸಿದೆ.
ಕಳೆದ ಹಲವು ವರ್ಷಗಳಿಂದ ಶಿವಮೊಗ್ಗದಲ್ಲಿ ಸರ್ಕಾರದ ಅನುದಾನ, ಜನಪ್ರತಿನಿಧಿಗಳ ಅನುದಾನದ ಹಣದಲ್ಲಿ ಕಟ್ಟಿದ್ದ ಸರ್ಕಾರದ ಕಟ್ಟಡವಾದ ಪತ್ರಿಕಾ ಭವನವನ್ನು ಪ್ರೆಸ್ ಟ್ರಸ್ಟ್ ಹೆಸರಿನಲ್ಲಿ ನಿರ್ವಹಣೆ ಮಾಡುತ್ತಾ ಬಂದಿದ್ದು, ಸುದ್ದಿಗೋಷ್ಠಿ ಮತ್ತು ಪ್ರೆಸ್‍ನೋಟ್, ಕಾರ್ಯಕ್ರಮದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿತ್ತು. ಇದು ಕಾನೂನು ಬಾಹಿರವಾಗಿದೆ ಎಂದು ಆಕ್ಷೇಪಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ವತಿಯಿಂದ ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿತ್ತು.

ಜನವರಿ 30ರಂದು ಪತ್ರಿಕಾಭವನಕ್ಕೆ ಬೀಗ ಹಾಕಿ ಜಿಲ್ಲಾಡಳಿತಕ್ಕೆ ಬೀಗದ ಕೀ ಕೊಡುವ ಚಳುವಳಿಯನ್ನು ಸಹ ಹಮ್ಮಿಕೊಳ್ಳಲಾಗಿತ್ತು ಎಂದು ಸಂಘಟನೆ ತಿಳಿಸಿದೆ.
ಜಿಲ್ಲಾಡಳಿತ ಅದಕ್ಕೂ ಎಚ್ಚೆತ್ತುಕೊಳ್ಳದಿದ್ದಾಗ ಮಾ.20ರಂದು ಪತ್ರಿಕಾ ಭವನದ ಆವರಣದಲ್ಲಿ ಸಾವಿರಾರು ಪತ್ರಕರ್ತರೊಂದಿಗೆ ಅಹೋರಾತ್ರಿ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಗ್ಗೆ ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು.
ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಈ ವಿಚಾರವಾಗಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ನಿವೃತ್ತ ನ್ಯಾಯಾಧೀಶ ರವೀಂದ್ರನಾಥ್ ಹೆಚ್.ಬಿ. ಇವರನ್ನು ನೇಮಕ ಮಾಡಿ ಆದೇಶ ಸಂಖ್ಯೆ: ಎಸ್‍ಎಂಡಿಸಿ.ಎಂಎಜಿ4/ಪ್ರೆಸ್/1/2025/584503 ದಿನಾಂಕ: 28-02-2025ರಂತೆ ಆದೇಶ ಹೊರಡಿಸಿದೆ. ಈ ಸಂಬಂಧ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸಭೆ ಕರೆದಿದ್ದು, ಈ ಸಭೆಯಲ್ಲಿ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಜಿಲ್ಲಾಧಿಕಾರಿಗಳ ಆದೇಶವನ್ನು ಸ್ವಾಗತಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಡಿ.ಜಿ. ನಾಗರಾಜ್ ಮಾತನಾಡಿ, “ಜಿಲ್ಲಾಧಿಕಾರಿಗಳ ಆದೇಶ ಸ್ವಾಗತಾರ್ಹ. ಇದು ಸಂಘಟಿತ ಹೋರಾಟಕ್ಕೆ ಸಿಕ್ಕ ಮೊದಲ ಜಯ. ತನಿಖೆಗೆ ನೇಮಕಗೊಂಡಿರುವ ಗೌರವಾನ್ವಿತ ನಿವೃತ್ತ ನ್ಯಾಯಾಧೀಶರು ನಿಸ್ಪಕ್ಷಪಾತವಾಗಿ ಹಾಗೂ ಪಾರದರ್ಶಕ ತನಿಖೆ ನಡೆಸಿ ವರದಿ ನೀಡುವರೆಂಬ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಪತ್ರಿಕಾಭನವಕ್ಕೆ ಆಡಳಿತಾಧಿಕಾರಿ ನೇಮಿಸುವುದು ನಿಶ್ಚಿತ ಮತ್ತು ಆ ಪತ್ರಿಕಾ ಭವನ ಎಲ್ಲ ಸಮಾನ ಮನಸ್ಕ ಪತ್ರಕರ್ತರ ಪತ್ರಿಕಾ ಭವನವಾಗಲಿದೆ” ಎಂದರು .
ಇದನ್ನೂ ಓದಿ: ಶಿವಮೊಗ್ಗ | ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಸಂಘ-ಸಂಸ್ಥೆಗಳು ಕಡಿಮೆ ದರದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಅವಕಾಶವಾಗಲಿದೆ. ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿರುವುದರಿಂದ ಮಾರ್ಚ್ 20ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ, ತನಿಖಾ ವರದಿ ಬರುವವರೆಗೆ ಮತ್ತು ಜಿಲ್ಲಾಧಿಕಾರಿಗಳು ನಿರ್ಧಾರ ಪ್ರಕಟಿಸುವರೆಗೆ ಕಾದು ನೋಡಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.
