ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಬಹಳಷ್ಟು ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಜಿಲ್ಲೆಯ ಸಾಗರ ತಾಲೂಕಿನ ಕಾನಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಡಗಳಲೆಯಲ್ಲಿರುವ ಮನೆಗಳು ಪ್ರತಿ ವರ್ಷ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿವೆ.
ಗ್ರಾಮದ ಸುತ್ತಲೂ ನೀರು ನಿಲ್ಲುತ್ತಿರುವುದರಿಂದ ಮಂಡಗಳಲೆ ನಿವಾಸಿಗಳು ಕಷ್ಟಕ್ಕೆ ಸಿಲುಕುತ್ತಿದ್ದಾರೆ. ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ, ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡುತ್ತಾರಾದರೂ, ಈವರೆಗೆ ಯಾವುದೇ ಭರವಸೆ ಪೂರ್ತಿಗೊಂಡಿಲ್ಲ ಎಂಬುದು ಗ್ರಾಮಸ್ಥರ ದೂರು.
ಎರಡು ಮನೆ ಕುಸಿತ
ಗ್ರಾಮದಲ್ಲಿ ಕಳೆದ ಸುಮಾರು 40 ವರ್ಷಗಳಿಂದ ಇದೇ ರೀತಿಯ ಪರಿಸ್ಥಿತಿ ಇದ್ದು, ಮಳೆಗಾಲದಲ್ಲಿ ನೆರೆ ಪರಿಸ್ಥಿತಿ ಉಂಟಾಗುತ್ತಿದೆ. ಗ್ರಾಮದಲ್ಲಿ ಸುಮಾರು 13 ದಲಿತ ಕುಟುಂಬ ವಾಸವಾಗಿದ್ದು, ಪ್ರಸ್ತುತ ಮಳೆಯಿಂದ ಜಯಲಕ್ಷ್ಮಿ ಹಾಗೂ ಪ್ರಕಾಶ್ ಎಂಬುವವರ ಮನೆಗಳು ಕುಸಿದು ಹೋಗಿದೆ.

ಗ್ರಾಮದಲ್ಲಿ ವಾಸಿಸುತ್ತಿರುವ ವಿಧವೆ ಜಯಲಕ್ಷ್ಮಿ ಎಂಬುವವರ ಮನೆ ಕುಸಿತಕ್ಕೊಳಗಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಮಾಡಿ ಜೀವನ ನಡೆಸುತ್ತಿರುವ ಇವರ ಕುಟುಂಬ ನೆರವಿಗೆ ಯಾರೂ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ.
ಈದಿನ.ಕಾಮ್ನೊಂದಿಗೆ ಮಾತನಾಡಿದ ಮನೆ ಕಳೆದುಕೊಂಡ ಸಂತ್ರಸ್ತ, “ಸುಮಾರು 25ಕ್ಕೂ ಅಧಿಕ ವರ್ಷಗಳಿಂದ ಮನೆ ಕಟ್ಟಿಕೊಂಡು ಇಲ್ಲಿ ವಾಸವಿದ್ದೇವೆ. ನಮಗೆ ಇದುವರೆಗೂ ಯಾವದೇ ಹಕ್ಕು ಪತ್ರ ನೀಡಿಲ್ಲ. ಮನೆ ಬಿದ್ದಿರುವ ಕಾರಣ ಸದ್ಯಕ್ಕೆ ಊರಿನಲ್ಲಿ ಇರುವ ಅಂಗನವಾಡಿಯಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲಿ ವಿದ್ಯುತ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಶೀಘ್ರದಲ್ಲಿ ನಮಗೆ ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ
ಗ್ರಾಮದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದ್ದು, ಊರಿನಲ್ಲಿರುವ ಕುಡಿಯುವ ನೀರಿನ ಬಾವಿಯಲ್ಲಿ ಹುಳ ಉಂಟಾಗಿದೆ. ಹಾಗಾಗಿ ಊರಿನಲ್ಲಿ ಬೋರ್‌ವೆಲ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ಹಾಗೆ ಸರಿಯಾದ ರಸ್ತೆ ವ್ಯವಸ್ಥೆ ಮಾಡಿಕೊಟ್ಟರೆ ಇಲ್ಲಿನ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಈ ದಿನ.ಕಾಮ್ ಜೊತೆಗೆ ಮಾತನಾಡಿದ ಡಿಎಸ್ಎಸ್(ನಾಗವಾರ ಬಣ) ಜಿಲ್ಲಾ ಸಂಚಾಲಕ ಸುರೇಶ್ ಸ್ವಾಮಿ ಹೇಳಿದರು.

“ಗ್ರಾಮದಲ್ಲಿ ನೀರು ಬಂದಾಗ ಅಧಿಕಾರಿಗಳು ಬರುತ್ತಾರೆ. ಅದು ಮಾಡಿಕೊಡುತ್ತೇವೆ, ಇದು ಮಾಡಿಕೊಡುತ್ತೇವೆ ಅಂತ ತಿಳಿಸುತ್ತಾರೆ. ಯಾವುದೂ ಕೂಡ ಸರಿಯಾಗಿ ಪೂರ್ತಿಯಾಗುವುದಿಲ್ಲ. ಸಾಮಾನ್ಯವಾಗಿ ಸರ್ಕಾರದಿಂದ ಇಂತಹ ಪರಿಸ್ಥಿತಿಯಲ್ಲಿ 1.60 ಲಕ್ಷ ಪರಿಹಾರ ನೀಡಲಾಗುತ್ತದೆ. ಆದರೆ, ಇದು ಅತ್ಯಂತ ಕಡಿಮೆ ಮೊತ್ತದ ಸಹಾಯವಾಗಿದ್ದು, ಇಂತಹ ಸಹಾಯದಿಂದ ಉತ್ತಮ ಗುಣಮಟ್ಟದ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಗಟ್ಟಿಮುಟ್ಟಾದ ಮನೆಗಳನ್ನು ಕಟ್ಟಿಕೊಳ್ಳಲು ಕನಿಷ್ಠ ಪಕ್ಷ 5 ರಿಂದ 8 ಲಕ್ಷದ ಮೊತ್ತದಲ್ಲಿ ಉತ್ತಮ ಗುಣಮಟ್ಟದ ಮನೆಗಳನ್ನು ಸರ್ಕಾರ ನಿರ್ಮಿಸಿಕೊಟ್ಟರೆ ಅನುಕೂಲವಾಗಲಿದೆ” ಎಂದರು.
ಊರಿನಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಕುಡಿಯುವ ನೀರಿಗೆ ಅಂತ ಜಲಜೀವನ್ ಮಿಶನ್ ಅಡಿಯಲ್ಲಿ ಪೈಪ್‌ಗಳನ್ನು ಹಾಕಿದ್ದಾರೆ. ಆದರೆ ಇದು ಸಮರ್ಪಕವಾದ ನೀರಿನ ವ್ಯವಸ್ಥೆ ಇಲ್ಲ. ಹಾಗೆಯೇ ಊರಿನಲ್ಲಿ ಬೋರ್‌ವೆಲ್ ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಡಿಎಸ್ಎಸ್ ಸಂಚಾಲಕರಾದ ಸುರೇಶ್ ಸ್ವಾಮಿ ಈ ದಿನ.ಕಾಮ್ ಮೂಲಕ ಮನವಿ ಮಾಡಿಕೊಂಡರು.
ಗ್ರಾಮಕ್ಕೆ ಸಾಗರ ತಾಲೂಕು ತಹಶೀಲ್ದಾರ್ ಭೇಟಿ
ಮನೆ ಬಿದ್ದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ ಸಾಗರ ತಹಶೀಲ್ದಾರ್ ಚಂದ್ರಶೇಖರ ನಾಯ್ಕ್ ಈ ದಿನ.ಕಾಮ್ ಜೊತೆಗೆ ಮಾತನಾಡಿದ್ದು, “ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಕೆಲವೊಂದು ಮನೆಗಳು ಬಿದ್ದಿರುವ ಬಗ್ಗೆ ವರದಿ ಸಿಕ್ಕಿದೆ. ಜೊತೆಗೆ ಕೃಷಿ ಭೂಮಿಗಳು ಕೂಡ ಜಲಾವೃತವಾಗಿದೆ. ಇದೇ ರೀತಿ ಮಳೆ ಹೆಚ್ಚಾದಲ್ಲಿ ಸಮಸ್ಯೆಗಳು ಮುಂದುವರೆಯುವ ಲಕ್ಷಣಗಳು ಕಾಣಿಸುತ್ತಿದೆ. ಮಂಡಗಳಲೆ ಗ್ರಾಮದಲ್ಲಿ ಎರಡು ಮನೆ ಕುಸಿದಿದೆ. ಇದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
“ಮಂಡಗಳಲೆ ಗ್ರಾಮದಲ್ಲಿನ ಮನೆಗಳು ತುಂಬಾ ಶಿಥಿಲಾವಸ್ತೆಯಲ್ಲಿ ಇದ್ದಿದ್ದರಿಂದ ಮಳೆಗೆ ಬಿದ್ದಿದೆ. ಸದ್ಯ ಮನೆ ಕಳೆದುಕೊಂಡವರಿಗೆ ಊರಿನಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ನಿರ್ಮಿಸಿ ಕೊಟ್ಟಿದ್ದೇವೆ. ನಮ್ಮ ವ್ಯಾಪ್ತಿಯಲ್ಲಿ ಇರುವ ಅವಕಾಶದಂತೆ ಬೇಕಾದಂತ ಸೌಕರ್ಯ ಒದಗಿಸಿ ಕೊಡುತ್ತಿದ್ದೇವೆ. ನಿರಂತರವಾಗಿ ನಮ್ಮ ಕಂದಾಯ ಸಿಬ್ಬಂದಿಗಳು, ಆರ್ ಡಿ ಪಿ ಆರ್ ಮತ್ತು ಪಿಡಿಓಗಳು ಇದರ ಕುರಿತು ಗಮನಿಸುತ್ತಿದ್ದಾರೆ. ಇಂಜಿನಿಯರ್ ಬಂದು ಪರಿಶೀಲನೆ ಮಾಡಿದ ನಂತರ ಸಂತ್ರಸ್ತರಿಗೆ ಪರಿಹಾರದ ವ್ಯವಸ್ಥೆ ಮಾಡಿಕೊಡಲಾಗುವುದು” ಎಂದರು.

ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಿದಂತೆ ಏನು ಕ್ರಮ ಜರುಗಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ” ಮಲೆನಾಡನಲ್ಲಿ ಅತೀ ಹೆಚ್ಚು ಮಳೆ ಆಗುವುದು ಸಹಜ. ಹಾಗಾಗಿ ಇಂತಹ ಸಮಯದಲ್ಲಿ ಶಿಥಿಲವಾದಂತ ಮನೆಗಳು ಹಾನಿಗೆ ಒಳಗಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಆಶ್ರಯ ಯೋಜನೆ ಅಥವಾ ಸರ್ಕಾರದ ಇತರೆ ಯೋಜನೆಗಳ ಮುಖಾಂತರ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಮನೆ ಕಟ್ಟಿಕೊಳ್ಳುವಾಗ ಗಟ್ಟಿಯಾದ ಮನೆಯನ್ನು ಕಟ್ಟುವಂತೆ ನೋಡಿಕೊಳ್ಳಬೇಕು” ಎಂದರು.
ಹಾಗೆಯೇ ಸರ್ಕಾರದ ಲಭ್ಯತೆ ಅನುಗುಣವಾಗಿ ಸಂತ್ರಸ್ತರಿಗೆ ಪರಿಹಾರ ಒದಗಿಸಿ ಕೊಡುವ ಕೆಲಸ ಮಾಡುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದಾರೆ.
