ಸಂವಿಧಾನದ ಆಶಯವಾದ ಸಮಸಮಾಜ ಕಟ್ಟಲು ಕಾಂತರಾಜ ಆಯೋಗದ ವರದಿ ಜಾರಿಗೆ ಒತ್ತಾಯಿಸಿ, ಸಂವಿಧಾನ, ಸಮಾಜಿಕ ನ್ಯಾಯ, ಸ್ವಾಭಿಮಾನದ ಸಂರಕ್ಷಣೆಗಾಗಿ ಶಿವಮೊಗ್ಗದಲ್ಲಿ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶವನ್ನು ಆಯೋಜಿಸಲಾಗಿದೆ.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಹಿಂದುಳಿದ ಜನ ಜಾಗೃತಿ ವೇದಿಕೆ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಸಂಘಟನೆಗಳ ಮುಖಂಡರು ನಡೆಸಿದ್ದಾರೆ.
“ಸಂವಿಧಾನದ ಪರಿಚ್ಛೇದ 15(4), 16(4) ಹಿಂದುಳಿದ ಜಾತಿ-ವರ್ಗಗಳ ಅಭಿವೃದ್ಧಿಗೆ ಶೈಕ್ಷಣಿಕ ಹಾಗು ಸಾಮಾಜಿಕ ಸಮೀಕ್ಷೆ ಅತ್ಯಂತ ಅವಶ್ಯಕ ಎಂಬುದನ್ನು ಒತ್ತಿ ಹೇಳಿದೆ. ಇದೇ ಅಂಶವನ್ನು ಭಾರತದ ಸುಪ್ರೀಂ ಕೋರ್ಟ್, ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ಮತ್ತು 1953ರ ನಂತರ ನೇಮಿಸಲ್ಪಟ್ಟ ವಿವಿಧ ಹಿಂದುಳಿದ ಆಯೋಗಗಳ ವರದಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಈ ಅಂಶಗಳನ್ನು ಆಧರಿಸಿ ಕಾಂಗ್ರೆಸ್ ಸರ್ಕಾರವು 2014ರಲ್ಲಿ ಕಾಂತರಾಜ ಅವರ ನೇತೃತ್ವದಲ್ಲಿ ಆಯೋಗ ರಚಿಸಿತ್ತು. 158.47 ಕೋಟಿ ರೂ. ವೆಚ್ಚದಲ್ಲಿ ಸಮೀಕ್ಷೆ ನಡೆಸಿ, ವರದಿಯನ್ನು ಸಿದ್ದಪಡಿಸಿದೆ. ಆದರೆ, ರಾಜಕೀಯ ಕುತಂತ್ರ ಹಾಗೂ ತಾಂತ್ರಿಕ ಕಾರಣಗಳಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗದೆ ಯಳಿದಿದೆ” ಎಂದು ಮುಖಂಡರು ಹೇಳಿದ್ದಾರೆ.
“2018ರ ಬಳಿಕ ಮುಖ್ಯಮಂತ್ರಿಗಳಾಗಿ ಅಧಿಕಾರಕ್ಕೆ ಬಂದ ಎಚ್.ಡಿ ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ವರದಿ ವರದಿ ಸ್ವೀಕರಿಸುವ ಯಾವುದೇ ಕ್ರಮವಾಗಲಿಲ್ಲ. ಈಗ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ವರದಿಯನ್ನು ಶೀಘ್ರವೇ 2023ರಲ್ಲೇ ಬಿಡುಗಡೆ ಮಾಡಬೇಕು. ಈ ವರದಿಯ ಚರ್ಚೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
“ಕೆಲವರು, ‘ಹೋಟೆಲ್ ಕೊಠಡಿಯಲ್ಲಿ ಕುಳಿತು ಅಂಕಿ-ಅಂಶ ಸಂಗ್ರಹಿಸಲಾಗಿದೆ’ ಎಂಬ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಾದ್ಯಂತ ಲಕ್ಷಾಂತರ ನೌಕರರು ಮನೆಮನೆಗೆ ತೆರಳಿ ಸಂಗ್ರಹಿಸಿರುವ ಮಾಹಿತಿಯನ್ನು ಹೋಟೆಲ್ ಕೊಠಡಿಯಲ್ಲಿ ಕುಳಿತು ಸಂಗ್ರಹಿಸಲಾಗಿದೆ ಎನ್ನುವುದು ಎಷ್ಟರಮಟ್ಟಿಗೆ ಸರಿ? ಹೋಟೆಲ್ ಕೊಠಡಿಯಲ್ಲಿ ಕುಳಿತು ಮನೆಮನೆಗಳ ಜಾತಿ, ಉದ್ಯೋಗ, ಶಿಕ್ಷಣ, ರಾಜಕೀಯ ಅಧಿಕಾರ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಸಂಗ್ರಹಿಸಲು ಸಾಧ್ಯವೆ? ಒಂದು ವೇಳೆ ಹಾಗೆ ಸಂಗ್ರಹಿಸಿದ್ದರೆ ಅದರ ಸಮಗ್ರ ತನಿಖೆಗೆ ಒತ್ತಾಯಿಸಲಿ. ಒಂದು ಹೋಟೆಲ್ ಕೊಠಡಿಯಲ್ಲಿ ಲಕ್ಷಾಂತರ ಸಮೀಕ್ಷೆದಾರರು ಸೇರಲು ಸಾಧ್ಯವೆ? ಯಾವ ವಿಚಾರವಂತರೂ ಈ ರೀತಿಯ ಮಾತನ್ನು ಆಡುವುದಿಲ್ಲ. ಈ ಮಾತುಗಳು ಸಮೀಕ್ಷೆ ಮಾಡಿರುವ ಆಯೋಗ ಮತ್ತು ನೌಕರರ ಪರಿಶ್ರಮಕ್ಕೆ ಅವಮಾನ ಮಾಡಿದಂತಾಗುವುದಿಲ್ಲವೆ? ಸಾರ್ವಜನಿಕವಾಗಿ ಮಾತನಾಡುವಾಗ ನಾಲಿಗೆಯ ತೆವಲು ತಣಿಸುವ ಮಾತಿಗೆ ಗಮನ ಕೊಡದ ವಿಚಾರವಂತರು ಮೆಚ್ಚುವಂತಿರಬೇಕು ಎಂಬುದನ್ನು ಮನಸೋಇಚ್ಛೆ ಮಾತನಾಡುವವರು ಯೋಚಿಸಬೇಕು” ಎಂದಿದ್ದಾರೆ.
“ದೇಶದ ಅಭಿವೃದ್ಧಿ ಎಂದರೆ ಒಂದೆರಡು ಜಾತಿ-ಜನಾಂಗಗಳ ಅಭಿವೃದ್ಧಿಯಲ್ಲ. ಎಲ್ಲ ಜಾತಿ-ಜನಾಂಗಗಳ ಅಭಿವೃದ್ಧಿ. ಈ ಅಭಿವೃದ್ಧಿಯನ್ನೇ ಎಲ್ಲರನೂ ಒಳಗೊಳ್ಳುವ ಅಭಿವೃದ್ಧಿ ಎನ್ನುವುದು. ಇಂತಹ ಅಭಿವೃದ್ಧಿ ಶೀಘ್ರವೇ ಬರಲಿ ಎಂಬುದು ಸಮಾವೇಶದ ಆಶಯವಾಗಿದೆ” ಎಂದು ಹೇಳಿದ್ದಾರೆ.
ಸಭೆಯಲ್ಲಿ ಪ್ರೊ. ಹೆಚ್. ರಾಚಪ್ಪ, ತೀ.ನ. ಶ್ರೀನಿವಾಸ್, ಪ್ರೊ. ಉಮೇಶ್ ಯಾದವ್, ಪ್ರೊ ಜಿ. ಪರಮೇಶ್ವರಪ್ಪ, ಪ್ರೊ. ಪ್ರಭಾಕರ್, ಪ್ರೊ. ಸಿ.ಬಿ. ಮನೋಹರಕುಮಾರ್, ಬಿ. ಜನಮೇಜಿರಾವ್, ರಾಮಕೃಷ್ಣ ಉರಣಕರ್, ಆರ್.ಟಿ. ನಟರಾಜ್ ಇದ್ದರು.