ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಪ್ರತಿದಿನ ಹೆದರಿಕೆಯಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ. ಆದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದು, ಜಾಣ ಕುರುಡರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ .
ದಾಸಕೊಪ್ಪ, ರಂಗನಾಥ ಬೀದಿ, ಹಳೆಸಂತೆ ಮಾರ್ಕೆಟ್, ಆಶೋಕರಸ್ತೆ ಹಾಗೂ ಆನಂದಪುರದ ಮುಂತಾದ ಬೀದಿಗಳಲ್ಲಿ ಬೀದಿ ನಾಯಿಗಳು ಹಿಂಡು ಹಿಂಡಾಗಿ ರಾಜಾರೋಷವಾಗಿ ತಿರುಗಾಡುತ್ತವೆ. ಇದರಿಂದ ಆನಂದಪುರದ ಮುಖ್ಯ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡಲಾಗುತ್ತಿಲ್ಲ. ಮಕ್ಕಳು, ವೃದ್ಧರು ಹಾಗೂ ಜನಸಾಮಾನ್ಯರು ಆತಂಕದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ. ಇದರೊಂದಿಗೆ ದ್ವಿಚಕ್ರ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ.

ಕೆಲವೊಂದು ಏಕಾಏಕಿ ರಸ್ತೆಗೆ ನಗ್ಗುವುದರಿಂದ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಅತಿಯಾದ ಸಮಸ್ಯೆಗಳಿಗೆ ಒಳಗಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಗರ ತಾಲೂಕಿನ ಆನಂದಪುರಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಈ ದಿ.ಕಾಮ್‌ನೊಂದಿಗೆ ಮಾತನಾಡಿ, “ಬೀದಿನಾಯಿಗಳ ಹಾವಳಿಯಾಗಿರುವುದು ನನ್ನ ಗಮನದಲ್ಲಿದೆ. ಹಾವಳಿ ನಿಯಂತ್ರಣಕ್ಕೆ ನಾವೂ ಕೂಡಾ ತುಂಬಾ ಪ್ರಯತ್ನ ಪಡುತ್ತಿದ್ದೇವೆ. ಮುಂಚೆ ನಾಯಿಗಳನ್ನು ಹಿಡಿಸುತ್ತಿದ್ದೆವು. ಆದರೆ ಪ್ರಾಣಿ ದಯಾ ಸಂಘದವರು ಸಂತಾನ ಹರಣ ಮಾಡಿಸಿ ಅಂತ ತಿಳಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ಮನವಿ ಮಾಡಿದ್ದೇವೆ. ಸಾಗರ ತಾಲೂಕು ಕೆಡಿಪಿ ಸಭೆಯಲ್ಲಿಯೂ ಪಶು ಅಧಿಕಾರಿಗಳಿಗೆ ತಿಳಿಸಿದ್ದೇವೆ. 15 ರಿಂದ 20 ದಿನದಲ್ಲಿ ಈ ಸಮಸ್ಯೆ ಬಗೆಹರಿಸಿ ಕೊಡುವ ಭರವಸೆ ನೀಡಿದ್ದಾರೆ” ಎಂದು ತಳಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕಾಂಗ್ರೆಸ್ ಸದಸ್ಯೆ ಲಲಿತಮ್ಮಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ: ಬಿಜೆಪಿ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್
“ಬೀದಿನಾಯಿಗಳ ಹಾವಳಿಯಿಂದ ಮಕ್ಕಳು ಮರಿ ಓಡಾಡುವುದೇ ಆತಂಕವಾಗಿದೆ. ನಾಯಿಗಳು ದಂಡುಗಟ್ಟಿ ಬರುತ್ತವೆ. ಇವುಗಳನ್ನು ನೋಡಿದರೇ ಭಯವಾಗುತ್ತದೆ. ಬೀದಿನಾಯಿ ಹಾವಳಿ ನಿಯಂತ್ರಣಕ್ಕೆ ಪಶು ಇಲಾಖೆ ಅಧಿಕಾರಿಗಳು ಶೀಘ್ರ ಪರಿಹಾರ ಒದಗಿಸಿಕೊಡಬೇಕು” ಎಂದು ಆನಂದಪುರಂ ಗ್ರಾಮಸ್ಥರು ಮನವಿ ಮಾಡಿದ್ದಾರೆ.
