ರೈತರ ಅಚ್ಚುಮೆಚ್ಚಿನ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುದುರೆಗಣಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಗ್ರಾಮಾಭಿವೃದ್ಧಿ ಸಮಿತಿಯಿಂದ ವಿಜೃಂಭಣೆಯಿಂದ ಆಚರಿಸಿದರು.
ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸುಮಾರು 100ಕ್ಕೂ ಅಧಿಕ ಹೋರಿಗಳು ಆಗಮಿಸಿದ್ದವು. ಹೋರಿಗಳು ಅಖಾಡದಲ್ಲಿ ಮಿಂಚಿನ ಓಟ ಮಾಡಿ ನೋಡುಗರ ಗಮನ ಸೆಳೆದವು. ಹೋರಿ ಹಬ್ಬ ನೋಡಲು ನೆರೆಯ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ಹೋರಿ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ರೋಮಾಂಚನಗೊಳಿಸಿತು. ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣ ಬಣ್ಣದ ಜೂಲ, ಬಲೂನು, ಹೂವು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸಿದ್ದರು. ಪೀಪಿ ಹೋರಿಗಳು ಅಖಾಡದಲ್ಲಿ ಬರುತ್ತಿದ್ದಂತೆ ನೆರೆದವರ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದವು.
ಅಖಾಡದಲ್ಲಿ ಗಾಮಾದ ದಂಗೆಯ ಕ್ರಾಂತಿ, ಹುಣಸೆಕಟ್ಟೆ ಜೈ ಹನುಮ, ಸೊರಬದ ರಾವಣ, ಉರುಗನಹಳ್ಳಿ ಗೂಳಿ, ಹಿರೇಜಂಬೂರು, ಕೊಡಕಣಿ ಡೇಂಜರ್ ಬಸವ, ಓಟೂರು ಮಾರಿಕಾಂಬ, ಹಳೇಸೊರಬ ರಾಕಿ ಬಾಯ್, ಓಟೂರು ಗೂಳಿ, ಬನವಾಸಿ ಕದಂಬ, ಸಾರೇಮರೂರು ಸರದಾರ, ಕುರದುರೆಗಣಿ ಗ್ರಾಮದ ಅಶ್ವ, ವಾಯುಪುತ್ರ, ವೀರಭದ್ರೇಶ್ವರ ಎಕ್ಸ್‌ಪ್ರೆಸ್, ಮಲೆನಾಡ ಪವರ್ ಸ್ಟಾರ್ ಸೇರಿದಂತೆ ಹಲವು ಹೆಸರಿನ ಹೋರಿಗಳು ಓಡಿದವು.
ಗ್ರಾಮದ ಹೋರಿ ಹಬ್ಬ ಆಚರಣಾ ಸಮಿತಿಯ ಪ್ರಮುಖ ಎಚ್ ಎಲ್ ರಾಘವೇಂದ್ರ ಮಾತನಾಡಿ, “ರೈತರ ಜನಪದ ಕ್ರೀಡೆಯಾದ ಹೋರಿ ಹಬ್ಬಕ್ಕೆ ಸರ್ಕಾರದಿಂದ ಪ್ರೋತ್ಸಾಹ ಮತ್ತು ಸಹಕಾರ ದೊರೆಯಬೇಕು. ಬೆಂಗಳೂರಿನಲ್ಲಿ ಕಂಬಳ ಆಯೋಜಿಸಿದಂತೆ ಹೋರಿ ಹಬ್ಬವನ್ನು ಆಚರಣೆ ಮಾಡುವ ಮೂಲಕ ಉತ್ತೇಜನ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಭಾರತೀಯರಿಗೆ ಗೌರವದ ಬದುಕು ನೀಡಿದ ಗ್ರಂಥ ಸಂವಿಧಾನ: ಶಾಕು ಬೋಧಿಧಮ್ಮ
ಹೋರಿ ಹಬ್ಬದ ಆಯೋಜಿಸಿದ್ದ ಕುದುರೆಗಣಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಗ್ರಾಮಾಭಿವೃದ್ಧಿ ಸಮಿತಿಯವರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಯನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ಹರಿಸಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಿದರು.