ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವ, ಸಿದ್ಧಾಂತವನ್ನು ಕಾಂಗ್ರೆಸ್ ಸರ್ಕಾರ ರೂಢಿಸಿಕೊಂಡಿದೆ. ಇಲ್ಲಿ ಎಲ್ಲಾ ಜಾತಿ- ಧರ್ಮಗಳನ್ನು ಸಮಾನತೆಯಿಂದ ಕಾಣುವ ಜೊತೆಗೆ, ತಳ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರಲಾಗುತ್ತಿದೆ ಎಂದು ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
ಬೈಂದೂರು ತಾಲೂಕಿನ ಗ್ರಾಮೀಣ ಕಾಂಗ್ರೆಸ್ ಇಡೂರು, ಚಿತ್ತೂರು ಮತ್ತು ವಂಡ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಂಡ್ಸೆಯಲ್ಲಿ ಶುಕ್ರವಾರ (ಏ.12) ಆಯೋಜಿಸಿದ್ದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಾರದರ್ಶಕ ಆಡಳಿತ ನಡೆಸುತ್ತಿದೆ. ಇಲ್ಲಿ ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮ ಬಾಳು ಎನ್ನುವ ತತ್ವವನ್ನು ಕಾಂಗ್ರೆಸ್ ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಅದೇ ರೀತಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು, ಬೈಂದೂರು ಕ್ಷೇತ್ರಕ್ಕೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದರು. ಅದೇ, ಹಾದಿಯಲ್ಲಿ ನಾನೂ ಕೂಡ ಹೆಜ್ಜೆ ಹಾಕುತ್ತೇನೆ ಎಂದರು.
ನಟ ಶಿವರಾಜಕುಮಾರ್ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಒಬ್ಬ ಮಹಿಳೆ ಮನಸ್ಸು ಮಾಡಿದರೆ, ಏನನ್ನು ಬೇಕಾದರೂ ಸಾಧಿಸಬಹುದು. ಅದಕ್ಕೆ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿವೆ. ಅದೇ ರೀತಿ, ಸಾಮಾಜಿಕ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಪಾರ. ಅದೇ ಕಾರಣಕ್ಕೆ ಗೀತಾ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರ ಬಾಳು ಹಸನಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅಶಕ್ತ ಕುಟುಂಬದ ಹೆಣ್ಣುಮಕ್ಕಳು ನಾಳೆಯ ಕುರಿತ ಕನಸು ಕಾಣಲು ಸಾಧ್ಯವಾಗಿದೆ ಎಂದರು.
ಬಡವರ ಕೈಗೆ ದುಡ್ಡು ಕೊಡುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಸಾರ್ವತ್ರಿಕ ಮೂಲ ಆದಾಯ ತತ್ವದ ಆಧಾರದ ಮೇಲೆ ಸೌಲಭ್ಯ ಒದಗಿಸುತ್ತಿದ್ದೇವೆ. ಇದನ್ನು ಸಹಿಸಲಾಗದ ಬಿಜೆಪಿಯವರು ಸುಳ್ಳಿನ ಕೃಷಿ ನಡೆಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಭೂ ರಹಿತ ಕುಟುಂಬಗಳಿಗೆ, ಭೂಮಿ ಕಲ್ಪಿಸಿಕೊಟ್ಟಿದ್ದರು. ಅದೇ ರೀತಿ, ಬೈಂದೂರು ಕ್ಷೇತ್ರಕ್ಕೂ ಅವರ ಕೊಡುಗೆ ಹೆಚ್ಚಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡುವ ಮೂಲಕ ಬಂಗಾರಪ್ಪ ಅವರ ಋಣ ತೀರಿಸಬೇಕಿದೆ ಎಂದರು.
ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ. ಆದರೆ, ಬಿಜೆಪಿ ನಾಯಕರು ನನಗೆ ಮೋಸ ಮಾಡಿದರು. ಆದರೆ, ಕಾಂಗ್ರೆಸ್ ಪಕ್ಷ ಪಾಪದ ಪಕ್ಷ. ನ್ಯಾಯದ ಪರ ಕಾಂಗ್ರೆಸ್ ಕೈ ಜೋಡಿಸುತ್ತದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಬೈಂದೂರಿನ ಹಕ್ಲಾಡಿ, ಆಜ್ರಿ, ಕೆರಾಡಿ/ ಬೆಳ್ಳಾಲ, ಕರ್ಕುಂಜೆ, ಗುಲ್ವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರಚಾರ ಸಭೆ ನಡೆಸಿದರು.
ಇದೇ ವೇಳೆ, ಬೈಂದೂರು ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಭಾಗದಲ್ಲಿ ಶಾಸ್ವತ ಕುಡಿಯುವ ನೀರಿನ ಯೋಜನೆಗೆ ಒತ್ತು ನೀಡಲಾಗುವುದು. ವರಾಯಿ ನಿರಾವರಿ ಯೋಜನೆ ಅನುಷ್ಠಾನದಲ್ಲಿದೆ. ಈ ಕುರಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಚರ್ಚಿಸಿ, ತ್ವರಿತಗತಿಯ ಕಾಮಗಾರಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಬೈಂದೂರು ಚುನಾವಣಾ ಉಸ್ತುವಾರಿ ಜಿ.ಎ. ಬಾವ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ್ ಪೂಜಾರಿ, ಪ್ರದೀಪ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸವಿತಾ ಆಚಾರ್ಯ, ವಂಡ್ಸೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಅವಿನಾಶ್ ಸೇರಿ ಕಾರ್ಯಕರ್ತರು ಉಪಸ್ಥಿತರಿದ್ದರು.
