ಶಿವಮೊಗ್ಗ ನಗರ ವ್ಯಾಪ್ತಿಯ ತುಂಗಾ ನದಿಯ ಸ್ಥಿತಿ, ತುಂಗಾ ನದಿಯು ಮಲಿನಗೊಳ್ಳುತ್ತಿರುವ ಬಗ್ಗೆ ಮಹಾನಗರ ಪಾಲಿಕೆಯ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಆರೋಪಿಸಿದರು.
ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, “ಮಹಾನಗರ ಪಾಲಿಕೆಯ ಅವಧಿ ನವೆಂಬರ್ 27ಕ್ಕೆ ಮುಕ್ತಾಯಗೊಂಡಿದ್ದು, ಆಡಳಿತ ಪಕ್ಷದಲ್ಲಿ ಅಧಿಕಾರದ ಅಂತಿಮ ದಿನ ತುಂಗೆಯ ಮಲಿನದ ಬಗ್ಗೆ ಸಭೆ ನಡೆಸಿ ತುರ್ತು ಕ್ರಮ ಕೈಗೊಂಡಿರುವುದು ನಾಮಾಕಾವಸ್ಥೆ ಕ್ರಮವಾಗಿದೆ” ಎಂದರು.
“ತುಂಗಾ ನದಿಗೆ ಸೇರುತ್ತಿರುವ ಕೊಳಚೆ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಅಲ್ಯೂಮಿನಿಯಂ ಅಂಶ ಹೆಚ್ಚಾಗಿದ್ದು, ಕ್ಲೋರಿನ್ ಶೇಷವು ಲೀಟರ್ ನೀರಿನಲ್ಲಿ 0.2 ಮಿ.ಗ್ರಾಂಗಿಂತ ಕಡಿಮೆ ಇದೆ. ಕುಡಿಯುವ ನೀರಿನ ಕ್ಲೋರಿನೇಷನ್ ಆಗಿರುವುದಿಲ್ಲ” ಎಂದು ಹೇಳಿದರು.
“ವೈದ್ಯಕೀಯ ತ್ಯಾಜ್ಯ, ಮಾಂಸ ಸೇರಿದಂತೆ ಇತರೆ ಅನುಪಯುಕ್ತ ವಸ್ತುಗಳನ್ನು ನದಿಯಲ್ಲೇ ವಿಸರ್ಜನೆ ಮಾಡಲಾಗುತ್ತಿದೆ. ಇದರಿಂದ ಇಡೀ ತುಂಗಾ ನದಿಯು ದೊಡ್ಡ ಗಟಾರದಂತೆ ಭಾಸವಾಗುತ್ತಿದೆ. ಕೊಳಚೆ ನೀರು ನದಿಗೆ ಸೇರುತ್ತಿರುವ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕು” ಎಂದು ಒತ್ತಾಯಿಸಿದರು.
“ಶಿವಮೊಗ್ಗ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ರಾಜ್ಯದ ಬೇರೆ ಯಾವ ನಗರಕ್ಕೂ ಹರಿದು ಬರದಷ್ಟು ಅನುದಾನ ಬಂದಿದ್ದರೂ ಆ ಹಣವೆಲ್ಲಾ ನದಿಯಲ್ಲಿ ಹೋಮ ಮಾಡಿದಂತಾಗಿದೆ. ಇಡೀ ಭಾರತದಲ್ಲಿ ತುಂಗಾ ನದಿ ಪರಿಶುದ್ಧ, ಪವಿತ್ರ ನದಿ ಎಂದು ಪರಿಗಣಿಸಿದ್ದು “ಗಂಗಾ ಸ್ನಾನಂ, ತುಂಗಾ ಪಾನಂ’ವೆಂಬ ನಾಣ್ಣುಡಿ ಮಲಿನಗೊಳ್ಳುತ್ತಿರುವ ತುಂಗಾ ನದಿಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ” ಎಂದು ಆರೋಪಿಸಿರು.
“ತುಂಗಾ ನದಿಯು ಇದೀಗ ಕಲುಷಿತವಾಗುತ್ತಿರುವ ಸ್ಥಿತಿ ಕಂಡು ಆ ನದಿಯ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಇಂಗ್ಲೆಂಡ್‌ನ ಥೇಮ್ಸ್ ನದಿ ಮಾದರಿಯಲ್ಲಿ 110 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿತ್ತು. ಪ್ರವಾಸಿ ಕೇಂದ್ರವನ್ನಾಗಿಸುವ ಯೋಜನೆಯೂ ಇತ್ತು. ಆದರೆ, ನದಿಯ ಈ ದಃಸ್ಥಿತಿಯಿಂದ ಅನುದಾನದ ಹಣ ದುರುಪಯೋಗಿರುವುದು ಸ್ಪಷ್ಟವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ
“ನಗರದ ಬಹುತೇಕ ವಾರ್ಡ್‌ಗಳ ಯುಜಿಡಿ ಸಂಪರ್ಕ ಹದಗೆಟ್ಟಿದ್ದು, ಐದು ವರ್ಷಗಳ ಕಾಲ ಆಡಳಿತ ನಡೆಸಿದ ಪಕಕ್ಷಗಳು ಮತ್ತು ವಿಪಕ್ಷಗಳು ಈ ಸಮಸ್ಯೆ ಬಗೆಹರಿಸಲು ವಿಫಲವಾಗಿವೆ” ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ನಜೀರ್ ಅಹಮದ್, ಮಾಧ್ಯಮ ವಕ್ತಾರ ಸುರೇಶ್ ಕೌಟೆಕಾರ್ ಮತ್ತು ಮಂಜುನಾಥ್ ಪೂಜಾರಿ ಸೇರಿದಂತೆ ಇತರರು ಇದ್ದರು.