ತೋಟಗಾರಿಕೆ ಬೆಳೆಗಳ ಸಸ್ಯೋತ್ಪಾದನೆ ಮತ್ತು ಮಾರಾಟದಿಂದ ರೈತರ ಆದಾಯ ದ್ವಿಗುಣಗೊಳಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ ಆರ್ ಸಿ ಜಗದೀಶ್ ತಿಳಿಸಿದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ ಪ್ರಾಯೋಜಿತ ತೋಟಗಾರಿಕಾ ಬೆಳೆಗಳ ನರ್ಸರಿ ನಿರ್ವಹಣೆ ಕುರಿತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಮ್ಮ ವಿಶ್ವವಿದ್ಯಾನಿಲಯ ಯಾವಾಗಲೂ ರೈತರ ಹಿತದೃಷ್ಟಿಯ ಬಗ್ಗೆ ಸದಾ ಚಿಂತಿಸುತ್ತ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದು, ಎಂದಿಗೂ ರೈತರ ಪರವಾಗಿ ಕೆಲಸ ಮಾಡುತ್ತಲೇ ಇರುತ್ತದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಸ್ತರಣಾ ನಿರ್ದೇಶಕ ಡಾ ಕೆ ಟಿ ಗುರುಮೂರ್ತಿ ಮಾತನಾಡಿ, “ರೈತರು ಬೆಳೆಯನ್ನು ಬೆಳೆಯುವಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ರೈತರು ವಿಶ್ವವಿದ್ಯಾಲಯದಲ್ಲಿರುವ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮತ್ತು ತೋಟಗಾರಿಕಾ ಕಾಲೇಜು ಹಾಗೂ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಸಂಪರ್ಕ ಬೆರೆಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು” ಎಂದು ಸಲಹೆ ನೀಡಿದರು.
ರೈತ ತರಬೇತಿ ಸಂಸ್ಥೆಯ ಮುಖ್ಯಸ್ಥ ಡಾ ಅಶೋಕ್ ಮಾತನಾಡಿ, “ರೈತರಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಅನೇಕ ತರಬೇತಿ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ರೈತ ತರಬೇತಿ ಸಂಸ್ಥೆಯಿಂದ ಆಯೋಜಿಸಲಾಗುವುದು” ಎಂದರು.
ಈ ತರಬೇತಿ ಕಾರ್ಯಕ್ರಮದ ಮೊದಲನೇ ದಿನ ರೈತರಿಗೆ ನರ್ಸರಿಯಲ್ಲಿ ವಿವಿಧ ರೀತಿಯ ಕಸಿ ಕಟ್ಟುವ ಮತ್ತು ಗೂಟಿ ಕಟ್ಟುವ ವಿಧಾನಗಳಿಂದ ಉತ್ತಮ ಸಸಿಗಳ ಸಸ್ಯೋತ್ಪಾದನೆ ಮಾಡುವ ಮಾಹಿತಿ, ಸಾವಯವ ಗೊಬ್ಬರಗಳ ತಯಾರಿಕೆ, ನೀರು ನಿರ್ವಹಣೆ ಮತ್ತು ಬ್ಯಾಂಕ್ ಸೌಲಭ್ಯಗಳು ಕುರಿತು ಸಂಪೂರ್ಣ ಮಾಹಿತಿ ನೀಡಲಾಯಿತು.
ಎರಡನೇ ದಿನ ರೈತರನ್ನು ಖಾಸಗಿ ನರ್ಸರಿ ಮತ್ತು ತೋಟಗಾರಿಕೆ ಇಲಾಖೆ ನರ್ಸರಿಗಳಿಗೆ ಭೇಟಿ ನೀಡಿಸಿ ವಿವಿಧ ಸಸಿಗಳ ಸಸ್ಯೋತ್ಪಾದನೆ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು.
ಮೂರನೇ ದಿನ ಸಮಾರೋಪ ಸಮಾರಂಭ ಕಾರ್ಯಕ್ರಮ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿರ್ದೇಶಕ ಡಾ ರವಿಕುಮಾರ್ ಎಂ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಸಚಿವ ಡಾ ಕೆ ಸಿ ಶಶಿಧರ್ ಅವರು ರೈತರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಲೇಡಿಗೋಷನ್ ಹೆರಿಗೆ ಅಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಬಾಣಂತಿ ಆತ್ಮಹತ್ಯೆ
ತರಬೇತಿಯಲ್ಲಿ ಪಾಲ್ಗೊಂಡ ಎಲ್ಲ ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು ಹಾಗೂ ತೆಂಗಿನ ಸಸಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಬಸವರಾಜಪ್ಪ ಭೋಗಿ ಹಿರಿಯ ಕ್ಷೇತ್ರ ಅದೀಕ್ಷಕರು, ಡಾ. ಸದಾಶಿವ ನಡುಕೇರಿ ಸಹಾಯಕ ಪ್ರಾಧ್ಯಾಪಕ ಮತ್ತು ಹೊನ್ನಪ್ಪ ಎಚ್ ಎಂ ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಇತರರು ಇದ್ದರು.
ವರದಿ : ಅಮಿತ್ ಆರ್, ಆನಂದಪುರ