ತುಂಗಭದ್ರಾ ಸಕ್ಕರೆ ಕಾರ್ಖಾನೆ ಸಂತ್ರಸ್ತರಿಗೆ ತೊಂದರೆಯಾಗುತ್ತಿದೆ. ಅವರ ಹಿತ ರಕ್ಷಣೆ ಮಾಡಬೇಕು. ಸಂತ್ರಸ್ತರ ಹಿತಕ್ಕೆ ಧಕ್ಕೆಯಾಗುವುದನ್ನು ತಡೆಯಲು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹಸೂಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಚೈತ್ರಾ ಮೋಹನ್ ಹೇಳಿದ್ದಾರೆ.
ಹಸೂಡಿ ಗ್ರಾ.ಪಂ ವ್ಯಾಪ್ತಿಯ ಸರ್ವೇ ನಂಬರ್ 111ರಲ್ಲಿರುವ ತುಂಗಭದ್ರಾ ಸಕ್ಕರೆ ಕಾರ್ಖಾನೆ ಸಂತ್ರಸ್ತರ ಹಿತರಕ್ಷಣೆಗಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆಯಲಾಗಿದೆ. ರಾಜ್ಯ ಸರ್ಕಾರ ಸಂತ್ರಸ್ತರ ಪರ ನಿಲ್ಲುವ ವಿಶ್ವಾಸವಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹಾಗೂ ಸಂತ್ರಸ್ತರ ಹಿತಕ್ಕೆ ಧಕ್ಕೆಯಾಗುವುದನ್ನು ತಡೆಯಲು ತಾವೂ ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರು ರಾಜೀನಾಮೆ ನೀಡಲು ಸಿದ್ಧ ಎಂದು ಹಸೂಡಿ ಗ್ರಾಪಂ ಅಧ್ಯಕ್ಷೆ ಚೈತ್ರ ಆರ್. ಮೋಹನ್ ತಿಳಿಸಿದ್ದಾರೆ.
ಹಸೂಡಿ ಪಂಚಾಯತಿ ವ್ಯಾಪ್ತಿಯಲ್ಲಿ ತುಂಗಭದ್ರಾ ಸಕ್ಕರೆ ಕಾರ್ಖಾನೆ ಸಂತ್ರಸ್ತರಾಗಿರುವ ನೂರಾರು ಮಂದಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಕೆಲವರು ಸಾಗುವಳಿ ಕೂಡ ನಡೆಸುತ್ತಿದ್ದಾರೆ. ಇವರಲ್ಲಿ ಬಹುತೇಕವಾಗಿ ದೀನ ದಲಿತರು, ಬಡವರು, ಕೂಲಿ ಕಾರ್ಮಿಕರು ಹಾಗೂ ಅತಿ ಸಣ್ಣ ರೈತರು ಇದ್ದಾರೆ. ಯಾವುದೇ ಕಾರಣಕ್ಕೂ ಇವರನ್ನು ಸರ್ಕಾರ ಒಕ್ಕಲೆಬ್ಬಿಸಲು ಬಿಡುವುದಿಲ್ಲ.
ತುಂಗಭದ್ರಾ ಸಕ್ಕರೆ ಕಾರ್ಖಾನೆ ಸಂತ್ರಸ್ತರ ಹಿತ ರಕ್ಷಣೆಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಬದ್ಧರಿದ್ದಾರೆ. ತುಂಗಭದ್ರಾ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಹಲವು ಗೊಂದಲುಗಳು ಎದ್ದಿವೆ. ಕಾನೂನು ಪರಿಣಿತರಾಗಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಪರಿಶೀಲಿಸಿ ಸರ್ಕಾರದ ಗಮನ ಸೆಳೆಯಲಿದ್ದಾರೆ.
ತಮಗೆ ತುಂಗಭದ್ರಾ ಸಕ್ಕರೆ ಕಾರ್ಖಾನೆ ಸಂತ್ರಸ್ತರ ಹಿತ ಮುಖ್ಯವೇ ಹೊರತು ಅಧಿಕಾರ ಅಲ್ಲ. ಸರ್ಕಾರ ಸಂತಸ್ತರ ಹಿತ ರಕ್ಷಣೆ ಮಾಡುವ ಸಂಪೂರ್ಣ ಭರವಸೆ ಇದೆ. ಜಿಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡ ಮಾರ್ಗದರ್ಶನದಲ್ಲಿ ಸಂತಸ್ತರೊಂದಿಗೆ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಸಿದ್ಧ ಎಂದರು.
ಕೆಲವು ಮಧ್ಯವರ್ತಿಗಳು ಸಂತ್ರಸ್ತರ ಆತಂಕದ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು ಆರ್ಥಿಕ ವ್ಯವಹಾರ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಚೈತ್ರ ಆರ್. ಮೋಹನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.