ಶಿವಮೊಗ್ಗ ನಗರದ ಹೃದಯ ಭಾಗವಾದ ಅಮಿರ್ ಅಹಮದ್ ವೃತ್ತದಲ್ಲಿ ಕೆಲವು ವರ್ಷಗಳ ಹಿಂದೆ ಅಂಡರ್‌ಪಾಸ್ ನಿರ್ಮಾಣ ಮಾಡಿದ್ದು, ತದ ನಂತರ ಸಮರ್ಪಕ ಸೇವೆ ಒದಗಿಸುವಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ವಿಫಲವಾಗಿದೆ.
ಸಾರ್ವಜನಿಕರಿಗೆ ಅನುಕೂಲವಾಗಬೇಕಿದಿದ್ದ ಅಂಡರ್‌ಪಾಸ್ ರಸ್ತೆ ಮುಚ್ಚಿರುವುದರಿಂದ ಜನಸಾಮಾನ್ಯರು ಅನಾನುಕೂಲಕ್ಕೆ ಈಡಾಗಿದ್ದಾರೆ. ಇದರಲ್ಲಿ ಕೊಳಚೆ ನೀರು, ಕಸ ಕಡ್ಡಿ ಸೇರಿಕೊಂಡು ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ. ನಗರದ ಹೃದಯ ಭಾಗದಲ್ಲಿ ಈ ಸಮಸ್ಯೆ ಯಾರ ಗಮನಕ್ಕೆ ಬಂದಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಪರಿಸರ ಪ್ರೇಮಿ ಮಂಜುನಾಥ್ ಈ ದಿನ.ಕಾಮ್‌ನೊ೦ಂದಿಗೆ ಮಾತನಾಡಿ, “ಸುಮಾರು ಎರಡ್ಮೂರು ವರ್ಷಗಳಿಂದ ಅಂಡರ್‌ಪಾಸ್ ರಸ್ತೆ ಮುಚ್ಚಿದ್ದು, ಅದರ ತುಂಬಾ ನೀರು ತುಂಬಿದ್ದು, ಎಲ್ಲಿಂದ ಬಂದು ಸೇರುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾರೂ ಕೂಡಾ ಯೋಚಿಸುತ್ತಿಲ್ಲ. ಇಲ್ಲೇ ಪಕ್ಕದಲ್ಲಿ ಸ್ಮಾರ್ಟ್ ಸಿಟಿ ಕಚೇರಿ ಇದೆ. ಶಿವಮೊಗ್ಗದ ಮಾಲ್ ಇದೆ. ಇದು ಜಿಲ್ಲೆಯ ಪ್ರಮುಖ ರಸ್ತೆಯಾಗಿದ್ದು, ಪ್ರತಿಭಟನೆ ಇತ್ಯಾದಿಗಳು ಇಲ್ಲೇ ನಡೆಯುತ್ತಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿನಗಳು ಎಲ್ಲರೂ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಹಾಗಿದ್ದರೂ ಕೂಡ ಯಾರೂ ಗಮನಹರಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಅಂಡರ್‌ಪಾಸ್‌ನಲ್ಲಿ ಬಹಳಷ್ಟು ಅಡಿಗಳಷ್ಟು ಕೊಳಚೆ ನೀರು ತುಂಬಿದೆ. ಕಸ ಕಡ್ಡಿ ಸೇರಿದೆ. ಹಾಗಾಗಿ ಇದರಿಂದ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ. ಇದರ ನಡುವೆ ಸಾರ್ವಜನಿಕರು ಹಿಡಿ ಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ” ಎಂದರು.
ಸಾರ್ವಜನಿಕ ಸುರೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಿವಮೊಗ್ಗದಲ್ಲಿ ಅಂಡರ್‌ಪಾಸ್ ನಿರ್ಮಾಣವಾಗಿರುವುದು ಸ್ವಾಗತಾರ್ಹ. ಆದರೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡದೆ ರಸ್ತೆಯನ್ನು ಮುಚ್ಚಿದ್ದಾರೆ. ಇದನ್ನು ತೆರವುಗೊಳಿಸಿ ಅನುಕೂಲ ಮಾಡಿಕೊಟ್ಟರೆ, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ವ್ಯಾಪಾರ ನಡೆಯುವಂತೆ, ಇಲ್ಲಿಯೂ ಬೀದಿಬದಿ ವ್ಯಪಾರಸ್ಥರಿಗೆ ವ್ಯಾಪಾರ ಮಾಡಲು ಅನುಕೂಲವಾಗುತ್ತದೆ. ಅವರು ರಸ್ತೆಯಲ್ಲಿ ನಿಂತು ವ್ಯಾಪಾರ ಮಾಡುವುದು, ಟ್ರಾಫಿಕ್ ಜಾಮ್ ಸೇರಿದಂತೆ ಇತರೆ ಸಮಸ್ಯೆಗಳು ಬಗೆಹರಿಯಲಿವೆ” ಎಂಧರು.

“ಬೀದಿಬದಿ ವ್ಯಾಪಾರ ಮಾಡುವವರ ಕುಟುಂಬಕ್ಕೂ ಅನುಕೂಲವಾಗಲಿದೆ. ಸಿಕ್ಕಾಪಟ್ಟೆ ಹಣವನ್ನು ಪೋಲುಮಾಡಿ ಈ ರೀತಿ ಅವ್ಯವಸ್ಥೆ ಮಾಡಿದ್ದಾರೆ. ಇಲ್ಲೇ ಪೊಲೀಸ್ ಬಾಕ್ಸ್ ಕೂಡ ಇದೆ. ನಿತ್ಯ ಟ್ರಾಫಿಕ್ ಪೊಲೀಸರೂ ಕೂಡಾ ಮಲಿನವಿರುವ ಜಾಗದಲ್ಲಿ ದುರ್ನಾತದ ನಡುವೆಯೇ ಕರ್ತವ್ಯ ಮಾಡಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಇಷ್ಟೆಲ್ಲಾ ಗಲೀಜಾಗಿರುವ ಕಾರಣ ಕೆಲವರು ಇಲ್ಲೇ ಮೂತ್ರ ವಿಸರ್ಜನೆ, ಉಗಿಯುವುದರಿಂ ಮತ್ತಷ್ಟು ಸಮಸ್ಯೆ ಜಾಸ್ತಿಯಾಗುತ್ತಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರ ಸಮಸ್ಯೆ ಬಗೆಹರಿಸಿ ಸೂಕ್ತ ಪರಿಹಾರ ಒದಗಿಸಿಕೊಡಬೇಕು” ಎಂದು ಒತ್ತಯಿಸಿದರು.
ಆಟೋ ಚಾಲಕ ಮಧು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಳೆ ಬಂದರೂ ಇದೇ ಸಮಸ್ಯೆ, ಇಲ್ಲದಿದ್ದರೂ ಇದೇ ಸಮಸ್ಯೆ. ಮಳೆನೀರು, ಕೊಳಚೆ ನೀರು, ಕಸಕಡ್ಡಿ ಎಲ್ಲ ಅಂಡರ್‌ಪಾಸ್‌ನಲ್ಲಿ ಸೇರುತ್ತಿದೆ. ಕೆಲವರು ಮೋಟಾರ್ ಇಟ್ಟು ನೀರು ಬಿಡುತ್ತಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಹಾಗಾಗಿ ಇದನ್ನು ಕೂಡಲೇ ಸರಿಪಡಿಸಿಕೊಡಬೇಕು. ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಡಬೇಕು” ಎಂದು ಮನವಿ ಮಾಡಿದರು.

ಶಿವಮೊಗ್ಗದ ಹೆಲ್ತ್ ಇನ್ಸ್‌ಪೆಕ್ಟರ್ ವೇಣುಗೋಪಾಲ್ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ್ದು, “ಅಂಡರ್‌ಪಾಸ್ ರಸ್ತೆ ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ವ್ಯಾಪ್ತಿಗೆ ಸೇರುತ್ತದೆ. ಅಲ್ಲಿ ನೀರು ತುಂಬಾ ಪ್ರಮಾಣದಲ್ಲಿ ತುಂಬಿದೆ. ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ಅವರ ಬಳಿ ಮೋಟಾರ್ ಇದೆ. ಹಾಗಾಗಿ ಅವರು ನೀರು ತೆಗೆದುಕೊಡಲಿ, ನಾವು ಸ್ವಚ್ಛತೆ ಮಾಡಿಸಿಕೊಡುತ್ತೇವೆ. ಅವರು ನಾಳೆಯೇ ನೀರು ಖಾಲಿ ಮಾಡಿಕೊಟ್ಟರೆ, ನಾನು ನಾಡಿದ್ದೇ ಸ್ವಚ್ಛತೆ ಮಾಡಿಸುತ್ತೇನೆ” ಎಂದು ತಿಳಿಸಿದ್ದಾರೆ.
ಜೆ ಇ ವಸಂತ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾನು ಹೊಸದಾಗಿ ನೇಮಕಗೊಂಡಿದ್ದೇನೆ. ಹಾಗಾಗಿ ಇದರ ಸಂಬಂಧ ನಮ್ಮ ಮುಖ್ಯ ಎಂಜಿನಿಯರ್‌ಗೆ ಮಾಹಿತಿ ನೀಡುತ್ತೇನೆ. ಹಾಗೂ ಅಂಡರ್ಪಾಸ್ ಭೂಮಿ ಕೆಳಭಾಗ ಆಗಿರುವ ಕಾರಣ ಸಿಪೇಜ್ ನೀರು ಮತ್ತು ಮಳೆನೀರು ಬಂದು ಸೇರುತ್ತೆ. ಹಾಗಾಗಿ ಕ್ರಮೇಣ ನೀರು ಜಾಸ್ತಿಯಾಗುತ್ತೆ. ನಿತ್ಯವೂ ಅಂಡರ್‌ಪಾಸ್ ಬಳಸಿದರೆ ಸರಿಯಾಗಿ ಮಾಹಿತಿ ಸಿಗಲಿದೆ. ಕ್ಲೀನ್ ಮಾಡಿಸುವುದು ಹಾಗೂ ಸಮಸ್ಯೆ ಬಗೆಹರಿಸಿ ಕೊಡುವ ವ್ಯವಸ್ಥೆ ಮಾಡಿಸುತ್ತೇನೆ” ಎಂದು ಭರವಸೆ ನೀಡಿದ್ದಾರೆ.

ಎಲೆಕ್ಟ್ರಿಕಲ್ ಮುಖ್ಯ ಎಂಜಿನಿಯರ್ ನಾಗರಾಜ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನೀರಿನಲ್ಲಿ ಕಸಕಡ್ಡಿ ತುಂಬಿದ್ದು, ಅನೈರ್ಮಲ್ಯ ಇರುವ ಕಾರಣ ವೇಣುಗೋಪಾಲ್ ಅವರು ಮೊದಲು ಅದನ್ನು ಸ್ವಚ್ಛತೆ ಮಾಡಿಸಿಕೊಡಲಿ, ನಂತರ ನಾನು ನೀರು ತೆಗೆಸುವ ವ್ಯವಸ್ಥೆ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.

ಸಮಸ್ಯೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಈ ದಿನ.ಕಾಮ್ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಕವಿತ ಯೋಗಣ್ಣನವರ್ ಅವರನ್ನು ಸಂಪರ್ಕಿಸಿದೆ. ಆದರೆ ಅವರು ಕರೆಗೆ ಲಭ್ಯವಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸ್ಮಾರ್ಟ್ ಸಿಟಿ ಅನುದಾನವಿದ್ದರೂ ಅವಳಿ ನಗರಕ್ಕಿಲ್ಲ ಸ್ಮಾರ್ಟ್ ಭಾಗ್ಯ: ರಾಜು ನಾಯಕವಾಡಿ ಆಕ್ರೋಶ
“ಇಲಾಖೆ ಅಧಿಕಾರಿಗಳು ಆರೋಪ ಪ್ರತ್ಯರೋಪ ಮಾಡುವ ಬದಲು ಸಹಕರಿಸಿಕೊಂಡು ಸಮಸ್ಯೆ ಸರಿಪಡಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಜತೆಗೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಅಂಡರ್‌ಪಾಸ್ ನಿರ್ಮಿಸಿ ಯಾವ ಕಾರಣಕ್ಕೆ ಮುಚ್ಚಿದ್ದರು ಎಂಬುದಕ್ಕೆ ಉತ್ತರ ನೀಡಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದರು.
