ಶಿವಮೊಗ್ಗ ನಗರದ ಅಲ್ಕೋಳ ಸರ್ಕಲ್ ಹಾಗೂ ಸಾಗರ ರಸ್ತೆಯಲ್ಲಿ ಶನಿವಾರ ಕುದುರೆಗೆ ವಾಹನ ಡಿಕ್ಕಿಯಾಗಿದ್ದು, ಕುದುರೆ ರಕ್ತಸ್ರಾವದಿಂದ ಬಳಲಿದ್ದು, ಗಾಯಗೊಂಡ ಕುದುರೆಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವೈದ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ರೇಖಾ ಎಸ್ ಟಿಯವರು ಬಂದು ಭೇಟಿ ನೀಡಿ ಕುದುರೆಗೆ ಚುಚ್ಚುಮದ್ದು ನೀಡಿ ಹೋಗಿರುವುದಾಗಿ ತಿಳಿದುಬಂದಿದೆ.
ಕುದುರೆ ತೀವ್ರ ನೋವಿಲ್ಲಿರುವ ಕಾರಣ ರಸ್ತೆಯಲ್ಲೆಲ್ಲ ತಿರುಗಾಡುತ್ತಿದೆ. ಹಾಗಾಗಿ ತೀವ್ರ ರಕ್ತಸ್ರಾವ ಉಂಟಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಇನ್ಫೆಕ್ಷನ್ ಆಗುವ ಸಾಧ್ಯತೆ ಇದೆ ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕುದುರೆಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕೆಂಬ ಸಾರ್ವಜನಿಕರ ಮನವಿಗೆ ಉಡಾಫೆ ಉತ್ತರ ನೀಡಿದ ಡಾ. ರೇಖಾ ಎಸ್ ಟಿಯವರು, ʼಪಶು ಆ್ಯಂಬುಲೆನ್ಸ್‌ಗೆ ಚಾಲಕ ಇಲ್ಲ. ಹಾಗಾಗಿ ನಾನು ಚುಚ್ಚುಮದ್ದು ನೀಡಿದ್ದೇನೆ. ನನ್ನ ಕರ್ತವ್ಯದ ಸಮಯ ಮುಗಿದಿದೆʼಯೆಂದು ತಿಳಿಸಿ ಹೋಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಅಧಿಕಾರಿಗಳು ಓಡಾಡಲು ಕಾರು ಇದೆ. ಅದೇ ಪ್ರಾಣಿಗಳ ಮೇಲೆ ಇವರ ಕರುಣೆ ಎಷ್ಟಿದೆ?. ಕೆಲವು ಪಶು ವೈದ್ಯರಿಗೆ ಕರೆ ಮಾಡಿದರೂ ಸರ್ಕಾರಿ ಪಶು ವೈದ್ಯಧಿಕಾರಿಗಳು, ʼಕೆಲಸದ ಸಮಯ ಮುಗಿದಿದೆ, ಬರುವುದಿಲ್ಲʼವೆಂದು ತಿಳಿಸಿದ್ದಾರೆ” ಎಂದು ಆರೋಪಿಸಿದರು.
“ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್ ಬಳಿ ಕುದುರೆ ನೋವಿನಿಂದ ಬಳಲುತ್ತ ಬಂದಿದ್ದನ್ನು ಗಮನಿಸಿದ ಸ್ಥಳೀಯರು ಶಿರಿಸಿಯ ಪ್ರಾಣಿ ದಯಾಸಂಘದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಾಣಿ ದಯಾಸಂಘದವರು ಕುದುರೆಗೆ ಚಿಕಿತ್ಸೆ ನೀಡಲು ಸಹಕರಿಸಿದ್ದಾರೆ. ಆದರೆ, ಪಶುವೈದ್ಯರ ಅಮಾನವೀಯ ವರ್ತನೆ ಖಂಡನೀಯ” ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ ರೇಖಾ ಎಸ್ ಟಿಯವರನ್ನು 2024ರ ಮಾರ್ಚ್ 03ರಂದು ಶಿವಮೊಗ್ಗ ಮಹಾನಗರ ಪಾಲಿಕೆ ನಗರಾಭಿವೃದ್ಧಿ ಇಲಾಖೆಗಡ ನಿಯೋಜನೆಗೊಂಡಿದ್ದರೂ ಪ್ರಸ್ತುತ, ಪ್ರತಿನಿಯೋಜನೆ ಮೇರೆಗೆ ಪಶು ಇಲಾಖೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿಯವರ ಗರಿಷ್ಠ ನಿಯೋಜನಾ ಅವಧಿಯು ಈಗಾಗಲೇ ಪೂರ್ಣಗೊಂಡಿದೆ. ಹಾಗಾಗಿ ನಗರಾಭಿವೃದ್ಧಿ ಇಲಾಖೆಯ ನಿಯೋಜನಾ ಸೇವೆಯಿಂದ ಪಶು ಇಲಾಖೆಗೆ ಹಿಂಪಡೆದು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜಡೆ ಎಂಬಲ್ಲಿನ ಪಶು ಆಸ್ಪತ್ರೆಗೆ ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳನಿಯುಕ್ತಿಗೊಳಿಸಿ, ಆದೇಶಿಸಿದೆಯೆಂದು ಸರ್ಕಾರದ ಅಧೀನ ಕಾರ್ಯದರ್ಶಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಪಶುಸಂಗೋಪನೆ) ಪತ್ರ ನೀಡಿ 4 ತಿಂಗಳು ಕಳೆದಿವೆ. ಆದರೂ ಶಿವಮೊಗ್ಗ ಮಹಾನಗರ ಪಾಲಿಕೆ ಮುಖ್ಯ ಪಶು ವೈದ್ಯಧಿಕಾರಿಯಾಗಿ ಮುಂದುವರೆಯಲು ಕಾರಣವೇನು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ; ರಾಜ್ಯದ ಮೊದಲ ಮಹಿಳಾ ನಿರ್ದೇಶಕರಾಗಿ ಪಿ ಎ ಸೀಮಾ ನೇಮಕ
“ವರ್ಗಾವಣೆಯಾಗಿದ್ದರೂ ಕೂಡಾ ನಾಲ್ಕು ತಿಂಗಳುಗಳಿಂದ ಇವರೇ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮುಂದುವರೆದಿದ್ದಾರೆ. ಆದರೂ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ. ಅಲ್ಲದೆ ಕುದುರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ರೇಖಾ ಅವರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಇತ್ತ ಕಡೆ ಸಂಬಂಧಪಟ್ಟವರಾದರೂ ಗಮನಕ್ಕೆ ತೆಗೆದುಕೊಳ್ಳುತ್ತಾರ ಎಂಬುದನ್ನು ನಿರೀಕ್ಷಿಸಬೇಕಾಗಿದೆ” ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಈ ದಿನ.ಕಾಮ್ ಮಹಾನಗರ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ರೇಖಾ ಎಸ್ ಟಿಯವರನ್ನು ಸಂಪರ್ಕಿಸಿದೆಯಾದರೂ ಅವರು ಕರೆಗೆ ಲಭ್ಯವಾಗಿಲ್ಲ.

Thank you so much for this update.
Thank you so much for this update!