ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು, ಡಿಸೆಂಬರ್ 9ರಿಂದ ತಮ್ಮ ಸ್ವಕ್ಷೇತ್ರ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನಾ ಪ್ರವಾಸ ಆರಂಭಿಸುತ್ತಿದ್ದಾರೆ. ತಮ್ಮ ಪ್ರವಾಸದ ಪ್ರಚಾರಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದ ಪೋಸ್ಟರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಫೋಟೋ ಕಾಣೆಯಾಗಿದ್ದು, ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಫೋಟೋ ಕಾಣೆಯಾದ ಬಗ್ಗೆ ನೆಟ್ಟಿಗರು, ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಮಾರ್ ಬಂಗಾರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೆಟ್ಟಿಗರ ಪ್ರಶ್ನೆಗೆ ಮಾಜಿ ಸಚಿವರು ಪ್ರತಿಕ್ರಿಯೆ ನೀಡಿದ್ದು, “ನನಗೆ ಇದು ಗೊತ್ತೇ ಆಗಿಲ್ಲ. ಅದನ್ನು ಗಮನಿಸುವೆ” ಎಂಬ ಸ್ಪಷ್ಠೀಕರಣ ನೀಡಿದ್ದಾರೆ. ಕೂಡಲೇ ಪೋಸ್ಟನ್ನು ಡಿಲೀಟ್ ಮಾಡಿದ್ದಾರೆ.

ಕುಮಾರ್ ಬಂಗಾರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಬಂಡಾಯ ಸಾರಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಂಪಿನಲ್ಲಿ ಗುರುತಿಸಿಕೊಂಡಿರುವವರು, ಅವರು ತಮ್ಮ ಪ್ರವಾಸದ ಕುರಿತಂತೆ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದರು. ಸದರಿ ಪೋಸ್ಟರ್‌ನಲ್ಲಿ ಸೊರಬ ಕ್ಷೇತ್ರದ ವಿವಿಧೆಡೆ ಬಿಜೆಪಿಯ ನೂತನ ಬೂತ್ ಮಟ್ಟದ ಸಮಿತಿ ರಚನೆಯ ವೇಳಾಪಟ್ಟಿಯನ್ನೂ ನೀಡಲಾಗಿತ್ತು. ಜತೆಗೆ ಪಕ್ಷದ ಪ್ರಮುಖ ನಾಯಕರ ಫೋಟೋಗಳನ್ನು ಹಾಕಿಲಾಗಿತ್ತು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಅವರ ಭಾವಚಿತ್ರಗಳಿದ್ದವು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಪೋಟೋವನ್ನು ಹಾಕಲಾಗಿರಲಿಲ್ಲ. ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಗಮನ ಸೆಳೆದಿತ್ತು. ಉದ್ದೇಶಪೂರ್ವಕವಾಗಿಯೇ ವಿಜಯೇಂದ್ರ ಅವರ ಭಾವಚಿತ್ರವನ್ನು ಕೈಬಿಟ್ಟಿದ್ದಾರೆಂಬ ಆರೋಪಗಳೂ ಕೇಳಿಬಂದವು.
ಯತ್ನಾಳ್ ಬಣದ ಪ್ರಮುಖ ನಾಯಕರಲ್ಲಿ ಕುಮಾರ್ ಬಂಗಾರಪ್ಪ ಕೂಡ ಒಬ್ಬರು. ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದ ಯತ್ನಾಳ್ ತಂಡದಲ್ಲಿ ಕುಮಾರ್ ಕೂಡ ಭಾಗಿಯಾಗಿದ್ದರು. ಅಲ್ಲದೆ, ಕೆಲ ದಿನಗಳ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂಬ ಆರೋಪದ ಮೇಲೆ ಕುಮಾರ್ ಬಂಗಾರಪ್ಪ ಅವರ ಐವರು ಕಟ್ಟಾ ಬೆಂಬಲಿಗರನ್ನು ಬಿಜೆಪಿ ಶಿವಮೊಗ್ಗ ಜಿಲ್ಲಾಧ್ಯಕ್ಷರು ಉಚ್ಚಾಟಿಸಿದ್ದರು. ಇದು, ಕುಮಾರ್ ಬಂಗಾರಪ್ಪ ಅವರ ಸಿಟ್ಟಿಗೂ ಕಾರಣವಾಗಿತ್ತು.
ವಿಜಯೇಂದ್ರ ವಿರುದ್ದ ಕುಮಾರ್ ಬಂಗಾರಪ್ಪ ಬಂಡೆದ್ದಿರುವ ಕಾರಣದಿಂದಲೇ, ಸೊರಬದಲ್ಲಿ ಅವರ ಬೆಂಬಲಿಗರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ವಿಶ್ಲೇಷಿಸಲಾಗಿದೆ ಎಂದು ಆರೋಪಿಸಲಾಗಿದೆ. ತಮ್ಮ ಬೆಂಬಲಿರನ್ನು ಉಚ್ಛಾಟಿಸಿದ ವಿಜಯೇಂದ್ರ ವಿರುದ್ಧದ ಸಿಟ್ಟು ಮತ್ತು ತಮ್ಮ ಪ್ರಾಬಲ್ಯತೆಯನ್ನು ತೋರಿಸಲು ಕುಮಾರ್ ಬಂಗಾರಪ್ಪ ಡಿಸೆಂಬರ್ 9ರಿಂದ ಸೊರಬ ಕ್ಷೇತ್ರದಲ್ಲಿ ಬಿಜೆಪಿ ಸಂಘಟನಾ ಪ್ರವಾಸ ಆರಂಭಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಿ ಆರ್ ಅಂಬೇಡ್ಕರ್ ಮಹಾ ಪರಿನಿಬ್ಬಾಣ ದಿನ
ವಿಜಯೇಂದ್ರ ವಿರುದ್ಧ ಯತ್ನಾಳ್ ಟೀಂ ಬಂಡಾಯವು, ಕುಮಾರ್ ಬಂಗಾರಪ್ಪ ಕಾರಣದಿಂದ ಸೊರಬ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಶಿಕಾರಿಪುರ ಅಥವಾ ಸೊರಬದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಂಡವು ಲಿಂಗಾಯತರ ಸಮಾವೇಶ ಆಯೋಜನೆಯ ಚಿಂತನೆ ನಡೆಸುತ್ತಿದೆ. ಬಿ.ಎಸ್ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರಗೆ ಅವರ ತವರೂರಲ್ಲಿಯೇ ಕೌಂಟರ್ ನೀಡಲು ಬಂಡಾಯ ತಂಡ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಯಾವೆಲ್ಲ ಬೆಳವಣಿಗೆಗಳು ನಡೆಯಲಿವೆ ಎಂಬುವುದನ್ನು ಕಾದು ನೋಡಬೇಕಿದೆ.