ಶಿವಮೊಗ್ಗ ನಗರದ ಹೃದಯ ಭಾಗದ ಕರ್ನಾಟಕ ಸಂಘದ ಹಿಂಭಾಗ ಇರುವ ಶತಮಾನೋತ್ಸವ ಆಚರಿಸಿರುವ, ಹಾಗೂ ಇಂದಿನ ಬಹಳಷ್ಟು ಗಣ್ಯರು ಓದಿರುವ ಶಾಲೆಯ ಪ್ರಸ್ತುತ ಹಂತ ದುಃಸ್ಥಿತಿಗೆ ತಲುಪಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಈ ಶಾಲೆಯ ಆವರಣದಲ್ಲಿ ಕನ್ನಡ, ಉರ್ದು ಹಾಗೂ ತಮಿಳು ಮಾದ್ಯಮ ಶಾಲೆ, ಪಿಯು ಕಾಲೇಜು ಮತ್ತು ಪದವಿ ಕಾಲೇಜು ಹೀಗೆ ಎಲ್ಲ ಶಾಲಾ ಕಾಲೇಜುಗಳು ಒಂದೇ ಆವರಣದಲ್ಲಿ ಬರುವ ಆವರಣದ ಪ್ರಸ್ತುತ ಪರಿಸ್ಥಿತಿ ಬಗ್ಗೆ ಹೇಳಲಸಾಧ್ಯವಾಗಿದೆ” ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.
“ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ಇರುವ ಉರ್ದು ಪ್ರೌಢ ಶಾಲೆಯ ತಡೆಗೋಡೆ ಕುಸಿದಿದ್ದು, ಗೇಟ್ ಕೂಡ ಇಲ್ಲದಂತಾಗಿದೆ. ಇದರಿಂದ ಶಾಲೆ-ಕಾಲೇಜುಗಳು ಮುಗಿದ ಬಳಿಕ ಈ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಜತೆಗೆ ಪುಂಡರ ಹಾವಳಿಗಳು ಹೆಚ್ಚಾಗಿದೆ. ಹೀಗಿದ್ದರೂ ಕೂಡ ಸ್ಥಳೀಯ ಆಡಳಿತವಾಗಲಿ, ಶಿಕ್ಷಣ ಇಲಾಖೆಯಾಗಲಿ, ಮಹಾನಗರ ಪಾಲಿಕೆಯಾಗಲಿ ಶಾಲೆಯತ್ತ ಗಮನ ಹರಿಸದೆ ನಿರ್ಲಕ್ಷ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ” ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
“ಶಾಲೆಯ ಆವರಣದ ತಡೆಗೋಡೆ ಬಹಳ ಹಳೆಯದಾಗಿದ್ದು ಹಾಗೂ ಮಳೆ ಬಂದು ಶಿಥಿಲಗೊಂಡು ಕುಸಿದು ಹಲವು ತಿಂಗಳುಗಳೇ ಕಳೆದಿವೆ. ತಡೆಗೋಡೆ ಪಕ್ಕದಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆ ಹಿಂಭಾಗ ಶಾಲಾ ಆವರಣದ ಒಳ ಬರಲು ಜಾಗವಿದ್ದು, ಮತ್ತೆ ಶಾಲೆಗೆ ಗೇಟ್ ಇಲ್ಲದ ಕಾರಣ
ಶಾಲಾ ವೇಳೆಯ ನಂತರ ಅಕ್ರಮ ಚಟುವಟಿಕೆಯ ತಾಣವಾಗಿದೆ” ಎಂದು ಸಾರ್ವಜನಿಕರು ಆರೋಪಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಅವರನ್ನು ಸಂಪರ್ಕಿಸಿದೆ. ಬಳಿಕ ಅವರು ಮಾತನಾಡಿ, “ಈ ಶಾಲಾ ಆವರಣ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತಿದ್ದು, ಒಂದು ವರ್ಷದ ಹಿಂದೆಯೇ ತಡೆಗೋಡೆ ಕುಸಿದಿದೆ. ಇದನ್ನು ರಿಪೇರಿ ಮಾಡಿಸಿಕೊಡಿ ಎಂದು ವರ್ಷದ ಹಿಂದೆಯೇ, ಮಹಾನಗರ ಪಾಲಿಕೆ ಗಮನಕ್ಕೆ ತಂದಿದ್ದು, ಮನವಿಯನ್ನೂ ಸಲ್ಲಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಭೂಹಗರಣ ಹೆಚ್ಚಳ; ಕಡತ ವಿಚಾರಣೆ ವೇಳೆ 750 ಎಕರೆ ಅಕ್ರಮ ಜಮೀನು ಪತ್ತೆ
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇದಕ್ಕೆ ಅನುದಾನ ಬಿಡುಗಡೆಯಾಗದ ಕಾರಣ ತಡೆಗೋಡೆ, ಗೇಟ್ ಮತ್ತು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲವೆಂದು ಹೇಳುತ್ತಿದೆ. ಹಾಗಾಗಿ ಇದು ಸಮಸ್ಯೆಯಾಗಿ ಉಳಿದಿದೆ. ಮತ್ತೊಮ್ಮೆ ಈ ಕುರಿತು ಮಹಾನಗರ ಪಾಲಿಕೆ ಗಮನಕ್ಕೆ ತರಲಾಗುವುದು” ಎಂದು ತಿಳಿಸಿದರು.
ಸಂಜೆ ಶಾಲಾ ಸಮಯದ ನಂತರ ಅತಿಕ್ರಮ ಪ್ರವೇಶ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಗುವುದು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಗಮನಕ್ಕೆ ಮತ್ತೊಮ್ಮೆ ಈ ವಿಷಯ ತಿಳಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.