ಭವ್ಯ ಭಾರತದ ಪ್ರಜೆಗಳಾಗಿರುವುದು ನಮ್ಮ ಹೆಮ್ಮೆ ಎಂದು ತೀರ್ಥಹಳ್ಳಿ ತಾಲೂಕು ದಂಡಾಧಿಕಾರಿ ಜಕ್ಕಣ್ಣಗೌಡರ್ ತಿಳಿಸಿದರು.
ತೀರ್ಥಹಳ್ಳಿ ಪಟ್ಟಣದ ಯು ಆರ್ ಅನಂತಮೂರ್ತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ಜಾತಿ, ಧರ್ಮ, ಭಾಷೆ, ಪ್ರದೇಶಗಳನ್ನು ಹೊರತುಪಡಿಸಿ ಕುಟುಂಬ ಮತ್ತು ವೃತ್ತಿಗಳೊಂದಿಗೆ ನಮ್ಮನ್ನು ಗುರುತಿಸಿಕೊಂಡಿದ್ದೇವೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಪೂರ್ವಜರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೀಗೆ ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಭಾರತಮಾತೆಗಾಗಿ ತಮ್ಮ ಆತ್ಮವಿಶ್ವಾಸದಿಂದ ಸಲ್ಲಿಸಿದ ಸೇವೆ ನಮಗೆ ಸ್ಪೂರ್ತಿದಾಯಕವಾಗಿದೆ” ಎಂದು ಸ್ಮರಿಸಿದರು.
“ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಎಲ್ಲ ರೀತಿಯ ಮೂಲಭೂತ ಹಕ್ಕು ಇದೆ. ಎಲ್ಲ ರೀತಿ ಸ್ವಾತಂತ್ರ್ಯ ಇದೆ. ಆದರೆ ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಬಾರದು. ಇತ್ತೀಚಿಗೆ ಕೇರಳ, ಉತ್ತರಾಖಂಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವರುಣನ ಅವಕೃಪೆಯಿಂದ ಅಸ್ತವ್ಯಸ್ತವಾದ ಜನಜೀವನ, ಆಸ್ತಿ ಹಾನಿ ಇವೆಲ್ಲವೂ ನಮ್ಮನ್ನು ಒಮ್ಮೆ ಮೌನವಾಗಿಸುತ್ತವೆ. ಅಲ್ಲಿನ ಜನತೆಗೆ ದೇವರು ಒಳಿತು ಮಾಡಲಿ” ಎಂದರು.
ಪ್ರಾಕೃತಿಕ ಭಾಗವಾದ ಕೆರೆ, ಗುಡ್ಡ ಇತ್ಯಾದಿಗಳನ್ನು ಕಾಪಾಡಿಕೊಂಡು ಮಾನವನ ಬದುಕನ್ನು ಹಾಸನಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದನ್ನು ಅರಿತು ಮುಂದಿನ ಪೀಳಿಗೆಗೆ ಕಟ್ಟಿಕೊಂಡು ಹೋಗೋಣ. ಸರ್ವ ಕ್ಷೇತ್ರದಲ್ಲಿ ವೇಗದ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ನಮ್ಮ ದೇಶದ ಮುಂದಿನ ಪೀಳಿಗೆಯಾದ ಯುವಜನಾಂಗ ಮೊಬೈಲ್‌ನಂತಹ ಆಧುನಿಕ ತಂತ್ರಜ್ಞಾನವನ್ನು ಸದ್ಭಳಕೆ ಮಾಡುವಂತೆ ಪ್ರೆರೇಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದರು.
“ನಮ್ಮ ರಾಷ್ಟ್ರದ ಕನಸುಗಳನ್ನು ನನಸಾಗಿಸಲು ಸೌಹಾರ್ದತೆ ಮತ್ತು ಸೋದರತ್ವ ಮನೋಭಾವದಿಂದ ಮುನ್ನೆಡೆಯೋಣ. ಪ್ರಸಕ್ತ ಸಾಲಿನಲ್ಲಿ ನಮ್ಮ ತೀರ್ಥಹಳ್ಳಿ ತಾಲೂಕನ್ನು ಉತ್ತಮ ವಿಚಾರಧಾರೆಗಳೊಂದಿಗೆ ಮುನ್ನಡೆಸೋಣ. ವಿಶೇಷವಾಗಿ ಗಡಿ ಕಾಯುತ್ತಿರುವ ನಮ್ಮ ಯೋಧರಿಗೆ ಆಂತರಿಕ ಭದ್ರತೆ ಒದಗಿಸುವ ಪೊಲೀಸರಿಗೆ, ಜೀವದ ಜೀವನಾಡಿ ರೈತರಿಗೆ, ವಿಜ್ಞಾನಿಗಳಿಗೆ, ದೇಶದ ಮೂಲೆ ಮೂಲೆಯ ಸುದ್ದಿಯನ್ನು ಬಿತ್ತರಿಸುವ ಮಾಧ್ಯಮದವರಿಗೆ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಲ್ಲಿ ಸಾರ್ವಜನಿಕ ಸೇವೆಯನ್ನು ಸಲ್ಲಿಸುತ್ತಿರುವ ಎಲ್ಲರಿಗೆ ಹಾಗೂ ಪ್ರತಿಯೊಬ್ಬ ನಾಗರಿಕರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಟ್ರಿಪಲ್ ವೆಸೆಲ್ ಕೊರೊನರಿ ಕಾಯಿಲೆಗೆ ತುತ್ತಾಗಿದ್ದ ಮಡಗಾಸ್ಕರ್ ದ್ವೀಪದ ವ್ಯಕ್ತಿ; ಶಸ್ತ್ರ ಚಿಕಿತ್ಸೆ ಯಶಸ್ವಿ
ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಡಿವೈಎಸ್‌ಪಿ ಗಜಾನನ ವಾಮನ ಸುತಾರ, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶೈಲ ಸೇರಿದಂತೆ ಹಲವರು ಇದ್ದರು.