ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ್ ಅವರು ನೀಡಿರುವ ಐತಿಹಾಸಿಕ ತೀರ್ಪು ಸ್ವಾಗತಾರ್ಹ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಹೇಳಿದರು.
ಶಿವಮೊಗ್ಗ ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಒಂದು ದಶಕದ ಹಿಂದೆ ಮರಕುಂಬಿಯಲ್ಲಿ ನಡೆದ ದಲಿತರು ಹಾಗೂ ಸವರ್ಣಿಯರ ನಡುವಿನ ಜಾತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಒಟ್ಟು 101 ಅಪರಾಧಿಗಳ ಪೈಕಿ 98 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಿದೆ. 2014ರ ಅಕ್ಟೋಬರ್ 14ರಂದು ಘಟಿಸಿದ್ದ ಸಂಘರ್ಷಕ್ಕೆ ಹತ್ತು ವರ್ಷದ ನಂತರ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ್‌ರವರು ನೀಡಿರುವ ಐತಿಹಾಸಿಕ ತೀರ್ಪು ನಿಜಕ್ಕೂ ಶ್ಲಾಘನೀಯ” ಎಂದರು.
“2014ರ ಆಗಸ್ಟ್ 28ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ಪವರ್ ಸಿನಿಮಾ ನೋಡಲು ಟಿಕೆಟ್ ಪಡೆಯುವಾಗ ದಲಿತರು ಹಾಗೂ ಸವರ್ಣೀಯರ ನಡುದೆ ಮಾತಿಗೆ ಮಾತು ಬೆಳೆದು ಶುರುವಾದ ಜಗಳ ಸಂಘರ್ಷಕ್ಕೆ ತಿರುಗಿತ್ತು. ಮರಕುಂಬಿ ಗ್ರಾಮದ ಸವರ್ಣೀಯ ಮಂಜುನಾಥ ಇಳಿಗೇರ ಹಾಗೂ ಇತರರು ಟಿಕೆಟ್ ಪಡೆಯುವಾಗ ಯಾರೋ ವ್ಯಕ್ತಿಗಳ ಜತೆಗೆ ಜಗಳ ಮಾಡಿಕೊಂಡಿದ್ದರು. ಆಗ ಅವರ ಮೇಲೆ ಹಲ್ಲೆಯಾಗಿತ್ತು. ಅದನ್ನು ಭೀಮೇಶನೇ ಮಾಡಿಸಿದ್ದಾನೆಂದು ತಪ್ಪು ತಿಳಿದುಕೊಂಡ ಮಂಜುನಾಥ ಗ್ರಾಮಕ್ಕೆ ಸವರ್ಣೀಯರನ್ನು ಕರೆದುಕೊಂಡು ಬಂದು ಅದೇ ಗ್ರಾಮದ ಮಾದಿಗ ಸಮುದಾಯದವರಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದ. ಗ್ರಾಮದಲ್ಲಿ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತೆಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ಭೀಮೇಶ ದೂರು ನೀಡಿದ್ದರು” ಎಂದರು.

“ಕೊಪ್ಪಳದ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ್ ಅವರು ಇದೀಗ ನೀಡಿರುವ ತೀರ್ಪು ಇಡೀ ದೇಶವೇ ತಿರುಗಿ ನೋಡುವಂತಹ ತೀರ್ಪಾಗಿದೆ. ಅಲ್ಲದೆ ಇತಿಹಾಸದ ಪುಟದಲ್ಲಿ ಅಳಿಸಲಾಗದ ಸದಾ ಕಾಲ ಉಳಿದುಕೊಳ್ಳುವ ತೀರ್ಪು. ಆಟ್ರಾಸಿಟಿ ಪ್ರಕರಣದಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ದೇಶದಲ್ಲಿ ಇದೇ ಮೊದಲ ಪ್ರಕರಣವಾಗಿದೆ. ಗಂಗಾವತಿ ತಾಲೂಕಿನ ಮರಕುಂಬಿ ಪ್ರಕರಣಕ್ಕಿಂತ ಕ್ರೂರವಾಗಿ ಈ ನಾಡಿನಲ್ಲಿ ಈ ಹಿಂದೆ ದೌರ್ಜನ್ಯ ನಡೆದಿದ್ದರೂ ಕೂಡ ಶೇ.99 ಪ್ರಕರಣಗಳಲ್ಲಿ ಅಪರಾಧಿಗಳು ಶಿಕ್ಷೆಯಿಂದ ಪಾರಾಗಿರುವ ಸಂದರ್ಭಗಳನ್ನು ನಾವು ನೋಡಿದ್ದೇವೆ” ಎಂದು ಹೇಳಿದರು.
“ಘನ ಘೋರವಾದ ಕಂಬಾಲಪಲ್ಲಿ ದಲಿತರ ಸಜೀವ ದಹನ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಲಿಲ್ಲ. ದಲಿತರ ಮೇಲೆ ಎಂತಹದೇ ದೌರ್ಜನ್ಯ ನಡೆದರೂ ನ್ಯಾಯಾಲಯದಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಅಭಿಪ್ರಾಯ ಮೂಡಿದ ಸನ್ನಿವೇಶದಲ್ಲಿ ಕೊಪ್ಪಳ ಜಿಲ್ಲಾ ನ್ಯಾಯಾಲಯದ ತೀರ್ಪು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಕೊಪ್ಪಳ ಭಾಗದಲ್ಲಿ ದಲಿತರನ್ನು ಮನುಷ್ಯರ ರೀತಿಯಲ್ಲಿಯೇ ಕಾಣುತ್ತಿರಲಿಲ್ಲ. ನಮ್ಮವರು ಮೇಲು ನಿಮ್ಮವರು ಕೀಳು ಎನ್ನುವ ಮನೋಭಾವ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ನರಸಿಂಹರಾಜಪುರ | ಸಾಗುವಾನಿ ಮರ ಕಳ್ಳತನ; ಆರು ಮಂದಿ ಆರೋಪಿಗಳ ಬಂಧನ
“ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಿದ್ದ ನಮ್ಮ ನಾಡು ಕೋಮು ಜಾತಿಯ ದಳ್ಳುರಿಯಿಂದ ನಲುಗಿದೆ. ಜನರಿಗೆ ಇನ್ನೂ ಯಾಕೆ ಪರಿಜ್ಞಾನವಿಲ್ಲ. ಇಂತಹ ಪ್ರಕರಣಗಳನ್ನು ಈಗಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕು. ಇದನ್ನು ಒಂದು ಪಾಠವೆಂದು ಪರಿಗಣಿಸಬೇಕು. ನ್ಯಾಯಾಧೀಶರಾದ ಚಂದ್ರಶೇಖರ್‌ರವರು ನೀಡಿರುವ ಈ ತೀರ್ಪು ಭಾರತ ದೇಶದಲ್ಲಿ ಸಂವಿಧಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ಎನ್ನುವ ಸಂದೇಶ ಇಡೀ ದೇಶಕ್ಕೆ ತಲುಪಿದಂತಾಗಿದೆ” ಎಂದು ಹೇಳಿದರು.