ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆ ಕಾಂಗ್ರೆಸ್ ಸದಸ್ಯೆ ಲಲಿತಮ್ಮನವರಿಗೆ ನೋವಾಗಿದ್ದರೆ ಕ್ಷಮೆಯಾಚಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್ ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಾಗರ ನಗರಸಭೆಗೆ ಎರಡು ವರ್ಷದಿಂದ ಅಧ್ಯಕ್ಷ ಉಪಾಧ್ಯಕ್ಷರಿಲ್ಲ. ಈಗ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ ಮೀಸಲಾತಿ ಹೊರಡಿಸಿ ಸರ್ಕಾರ ಆದೇಶಿಸಿತ್ತು.
“ಮೀಸಲಾತಿಯನ್ನು ಪ್ರಶ್ನಿಸಿ ಕಾಂಗ್ರೆಸ್ ಸದಸ್ಯೆ ಲಲಿತಮ್ಮ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದನ್ನು ನಗರಸಭೆ ಸಭೆಯಲ್ಲಿ ಪ್ರಶ್ನಿಸಿದಾಗ, ʼಕಾಂಗ್ರೆಸ್ ಹಿತಾಸಕ್ತಿಯಿಂದ ತಡೆಯಾಜ್ಞೆ ತರಲಾಗಿತ್ತ ಅಥವಾ ಲಲಿತಮ್ಮನವರ ಸ್ವಇಚ್ಛೆಯಿಂದ ತಂದಿದ್ದʼ ಎಂದು ಕೇಳಿದ್ದೆ. ಕಾಂಗ್ರೆಸ್ ಪಕ್ಷ ಲಲಿತಮ್ಮರ ಸ್ವಇಚ್ಛೆಯೆಂದು ಹೇಳಿತ್ತು. ನಗರ ಸಭೆಯ ಕಾಯ್ದೆ ಪ್ರಕಾರ ತಡೆಯಾಜ್ಞೆ ತಂದವರು ಸಭೆಗೆ ಭಾಗಿಯಾಗುವಂತಿಲ್ಲವೆಂಬ ಕಾನೂನು ಇದೆ. ಆದರೆ ಲಲಿತಮ್ಮ ಸಭೆಗೆ ಭಾಗಿಯಾಗಿ ನಮ್ಮ ವಿರುದ್ಧವೇ ಆರೋಪಿಸಿದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆ ಬೃಹತ್ ಪ್ರತಿಭಟನೆ
“ತಡೆಯಾಜ್ಞೆ ತಂದು ಅಪರಾಧಿಯಾಗಿದ್ದೀರೆಂದು ಹೇಳಿದ್ದು ಸತ್ಯ. ಆದರೆ ಅದರ ಉದ್ದೇಶ ಅವರನ್ನು ನಿಂದಿಸುವುದಾಗಿರಲಿಲ್ಲ. ಅದರ ಹಿಂದಿನ ಉದ್ದೇಶ ಮಹಿಳೆಯ ಸಬಲೀಕರಣಕ್ಕೆ ತಡೆಯಾಜ್ಞೆ ತರಲಾಗಿದೆಯೆಂಬ ಉದ್ದೇಶವಿತ್ತು. ಪೂರ್ವಾಗ್ರಹ ಪೀಡಿತ ಅಂಶ ನನ್ನ ಹೇಳಿಕೆ ಹಿಂದಿರಲಿಲ್ಲ” ಎಂದು ಹೇಳಿದ್ದಾರೆ.
“ಆದರೂ ನಾನು, ಗಣೇಶ್ ಪ್ರಸಾದ್, ಮಧುರಾ ಶಿವಾನಂದ್ ಮತ್ತು ಮಹೇಶ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಅವರ ಮನಸ್ಸಿಗೆ ನೋವಾಗಿದ್ದರೆ, ನಾನು ಸೇರಿ ನಾಲ್ವರು ಕ್ಷಮೆಯಾಚಿಸಿದ್ದೇವೆ” ಎಂದರು.