ಕಳೆದ ಜುಲೈನಲ್ಲಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ್ದ ಭೀಕರ ಗುಡ್ಡಕುಸಿತ ದುರ್ಘಟನೆಯು ದೇಶದ ಗಮನ ಸೆಳೆದಿತ್ತು. ಗುಡ್ಡ ಕುಸಿತದಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಕೇರಳದ ಲಾರಿ ಚಾಲಕ ನದಿಗೆ ಬಿದ್ದಿದ್ದರಿಂದ ಕೇರಳದ ಬಹುಸಂಖ್ಯೆಯ ಮಾಧ್ಯಮಗಳು ಶಿರೂರಿನಲ್ಲಿ ಬೀಡುಬಿಟ್ಟು, ವರದಿ ಮಾಡಿದ್ದವು. ಆ ದುರ್ಘಟನೆಯಲ್ಲಿ ಕಾಣೆಯಾದವರಲ್ಲಿ ಇನ್ನೂ ಇಬ್ಬರ ಮೃತದೇಹಗಳು ಪತ್ತೆಯಾಗಿಲ್ಲ. ಆದರೆ, ಕಾಣೆಯಾದವರ ಪತ್ತೆ ಕಾರ್ಯಾಚರಣೆ ಈಗಾಗಲೇ ಸ್ಥಗಿತಗೊಂಡಿದ್ದು, ತಮ್ಮ ಸ್ವಂತದವರನ್ನು ಕಳೆದುಕೊಂಡ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ನಿರಂತರ ಕಾರ್ಯಾಚಣೆಯಿಂದಾಗಿ 9 ಮಂದಿಯ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಆದರೆ, ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಎಂಬವರ ಮೃತದೇಹ ಪತ್ತೆಯಾಗಿಲ್ಲ. ಆದರೂ, ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಅವರು ಮೃತಪಟ್ಟಿದ್ದಾರೆಂದು ಮರಣ ಪ್ರಮಾಣ ಪತ್ರವನ್ನಾದರೂ ಕೊಡಿ ಎಂದು ಆಡಳಿತದಲ್ಲಿ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಆ ಇಬ್ಬರು ಮೃತಪಟ್ಟಿದ್ದಾರೆಂದು ಮರಣ ಪ್ರಮಾಣ ಪತ್ರವನ್ನೂ ಕೊಡುತ್ತಿಲ್ಲ. ಹೀಗಾಗಿ ಮರಣ ಪತ್ರ ಕೊಡಿ, ಇಲ್ಲವೇ ಕಾರ್ಯಾಚರಣೆ ಮುಂದುವರೆಸಿ ಎಂದು ಕಾಣೆಯಾದವರ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
ಈ ನಡುವೆ, ಶಿರೂರು ಗುಡ್ಡ ಅಗೆದು ರಸ್ತೆ ನಿರ್ಮಾಣ ಮಾಡಿದ್ದ ಐಆರ್‌ಬಿ ಕಂಪನಿಯು ಅವೈಜ್ಞಾನಿಕವಾಗಿ ಗುಡ್ಡ ಅಗೆದಿದ್ದರಿಂಂದಲೇ ಗುಡ್ಡ ಕುಸಿತ ಸಂಭವಿಸಿದೆ ಎಂದು ಕಂಪನಿಯ ವಿರುದ್ಧ ದೂರು ದಾಖಲಿಸಲಾಗಿದೆ. ಆದರೆ, ಕಂಪನಿಯೊಂದಿಗೆ ಎಸ್ಪಿ ಎಂ ನಾರಾಯಣ್ ಹೊಂದಾಣಿಕೆ ಮಾಡಿಕೊಂಡಿದ್ದು, ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪಗಳಿವೆ. ಎಸ್ಪಿ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂಬ ಒತ್ತಾಯಗಳೂ ಕೇಳಿಬಂದಿವೆ.