ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿ ಲಾರಿ ಚಾಲಕ ಅರ್ಜುನ ಸೇರಿದಂತೆ ಇತರರಿಗಾಗಿ ನಡೆಸಲಾಗುತ್ತಿದ್ದ ಶೋಧ ಕಾರ್ಯಾಚರಣೆ 10ನೇ ದಿನವೂ ಮುಂದುವರಿಸಲಾಗಿದೆ.
ಈ ಘಟನೆಯಲ್ಲಿ ಉಳುವರೆ ಗ್ರಾಮದ ಹಲವು ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಇದರಿಂದಾಗಿ ಹಲವು ಕುಟುಂಬಗಳು ಸಂತ್ರಸ್ಥರಾಗಿದ್ದಾರೆ. ಉಳುವರೆ ಗ್ರಾಮದ ಆರು ಮನೆಗಳು ಸಂಪೂರ್ಣ ನಾಶವಾದರೆ, ಸುಮಾರು 21 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ಘಟನೆ ನಡೆದ ಉಳುವರೆ ಗ್ರಾಮಕ್ಕೆ ಭೇಟಿ ನೀಡಿರುವ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (HRS)ಯ ಕಾರ್ಯಕರ್ತರು ಪರಿಹಾರ ಕಾರ್ಯ ಆರಂಭಿಸಿದ್ದಾರೆ.
ಶಿರೂರು ಸಮೀಪದ ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದ ಹಲವು ಕುಟುಂಬಗಳು ಸಂತ್ರಸ್ಥರಾಗಿದ್ದರು. ಏಳು ಮನೆಗಳು ಸಂಪೂರ್ಣ ನಾಶವಾದರೆ 21 ಮನೆಗಳು ಭಾಗಶಃ ಹಾನಿಗೊಳಗಾಗಿದ್ದವು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ @hrskarnataka ಕಾರ್ಯಕರ್ತರು ರೇಷನ್ ಮುಂತಾದ ಅಗತ್ಯ ವಸ್ತುಗಳನ್ನು ಅರ್ಹರಿಗೆ ವಿತರಿಸಿದರು. pic.twitter.com/ENboRnuVc7
— eedina.com ಈ ದಿನ.ಕಾಮ್ (@eedinanews) July 25, 2024
ಮೊದಲ ಹಂತದಲ್ಲಿ ಸರ್ವೆ ಕಾರ್ಯ ನೆರವೇರಿಸಿದ್ದ ಹೆಚ್‌ಆರ್‌ಎಸ್ ಕಾರ್ಯಕರ್ತರು, ಅರ್ಹರಿಗೆ ಬೇಕಾದ ಅಗತ್ಯ ನೆರವನ್ನು ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ರೈನ್ ಕೋಟ್, ಸ್ಟೌವ್, ರೇಷನ್ ಮುಂತಾದ ಅಗತ್ಯ ವಸ್ತುಗಳನ್ನು ಅರ್ಹರಿಗೆ ವಿತರಿಸಿದ್ದಾರೆ. ಹೆಚ್‌ಆರ್‌ಎಸ್‌ನ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಕಾರ್ಯಕರ್ತರು ಈ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಪರಿಹಾರ ಕಾರ್ಯದಲ್ಲಿ ತೊಡಗಿರುವ ಹೆಚ್‌ಆರ್‌ಎಸ್ ಸಂಘಟನೆಯ ರಾಜ್ಯ ಕ್ಯಾಪ್ಟನ್ ಆಗಿರುವ ಅಮೀರ್ ಸಿದ್ದೀಕ್ ಕುದ್ರೋಳಿ ಈ ದಿನ.ಕಾಮ್ ಜೊತೆಗೆ ಮಾತನಾಡಿದ್ದು, “ಎಲ್ಲರೂ ಈಗ ಲಾರಿ ಚಾಲಕ ಅರ್ಜುನ್ ಹಾಗೂ ಇತರರು ಸಿಗಲೆಂದು ಪ್ರಾರ್ಥನೆ ಮಾಡುವಲ್ಲಿ ನಿರತರಾಗಿದ್ದಾರೆ. ಅವರು ಬದುಕಿದ್ದಾರೋ, ಇಲ್ಲವೋ ಎಂದು ಯಾರಿಗೂ ತಿಳಿದಿಲ್ಲ. ಆದರೆ, ಘಟನೆಯಿಂದ ಉಳುವರೆ ಗ್ರಾಮದ ಹಲವು ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದು ಕೂಡ ಎಲ್ಲರಿಗೂ ತಿಳಿದಿದೆ. ಇದರಲ್ಲಿ ಬದುಕುಳಿದವರು ತಮ್ಮ ಮನೆ ಕಳೆದುಕೊಂಡು ತೀರಾ ಸಂಕಷ್ಟದಲ್ಲಿದ್ದಾರೆ. ಅವರ ಬಗ್ಗೆಯೂ ಎಲ್ಲ ಮಾಧ್ಯಮಗಳು ವರದಿ ಮಾಡಬೇಕಿದೆ. ಸರ್ಕಾರ ಇವರಿಗೆ ಸುರಕ್ಷಿತ ಸ್ಥಳದಲ್ಲಿ ಮನೆ ನಿರ್ಮಿಸಲು ಮುಂದಾಗಬೇಕಿದೆ” ಎಂದು ಆಗ್ರಹಿಸಿದ್ದಾರೆ.
“ಸದ್ಯ ನಾವು ಪರಿಸ್ಥಿತಿಯನ್ನು ಅವಲೋಕನ ನಡೆಸಿದ್ದು, ಮೊದಲ ಹಂತದಲ್ಲಿ ಸರ್ವೆ ಕಾರ್ಯ ನೆರವೇರಿಸಿದ್ದೇವೆ. ಸದ್ಯ ಅರ್ಹರಿಗೆ ರೈನ್ ಕೋಟ್, ಸ್ಟೌವ್, ರೇಷನ್ ಕಿಟ್, ಪಾತ್ರೆ ಸೇರಿದಂತೆ ಮುಂತಾದ ಅಗತ್ಯ ಮೂಲಭೂತ ವಸ್ತುಗಳನ್ನು ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಂತ್ರಸ್ಥರ ಪುನರ್ವಸತಿ ಕಾರ್ಯದಲ್ಲೂ ಕೈಜೋಡಿಸಲು ಶ್ರಮಿಸುತ್ತೇವೆ” ಎಂದು ಈ ದಿನ.ಕಾಮ್ಗೆ ತಿಳಿಸಿದ್ದಾರೆ.
ಪರಿಹಾರ ಕಾರ್ಯದ ವೇಳೆ ಹೆಚ್‌ಆರ್‌ಎಸ್‌ನ ಭಟ್ಕಳದ ನಾಯಕ ಅನಮ್ ಆಲಾ, ಬಿಲಾಲ್ ಉಡುಪಿ, ಝುಬೈರ್ ಮಲ್ಪೆ, ಸಲೀಂ ಮಲ್ಪೆ,ಕಮರುದ್ದೀನ್ ಭಟ್ಕಳ, ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಭಟ್ಕಳ ಘಟಕದ ಅಧ್ಯಕ್ಷ ಮೌಲಾನ ಝುಬೇರ್ ಮೌಲವಿ ಸೇರಿದಂತೆ ಮತ್ತಿತರಲ್ಲಿದ್ದರು.
ಗುಡ್ಡ ಕುಸಿತ ದುರಂತದಲ್ಲಿ ಈವರೆಗಿನ ಮಾಹಿತಿಯಂತೆ 12 ಮಂದಿ ಮೃತಪಟ್ಟಿದ್ದು ಎಂಟು ಮಂದಿಯ ಮೃತದೇಹ ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಬಳಿ ಚಹಾ ಅಂಗಡಿ ನಡೆಸುತ್ತಿದ್ದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದರು ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಅವರಿದ್ದ ಟ್ರಕ್ ಕೂಡ ಮಣ್ಣಲ್ಲಿ ಹೂತು ಹೋಗಿದ್ದು ರಕ್ಷಣಾ ಕಾರ್ಯ ಸತತವಾಗಿ ನಡೆಯುತ್ತಿದೆ. 10 ನೇ ದಿನಕ್ಕೆ ಕಾಲಿಟ್ಟಿದೆ.
