ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲೊಟ್ಟು ಸೇತುವೆ ಕೆಳಗಿನ ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷಗಳು ಪತ್ತೆಯಾದ ಪ್ರಕರಣವನ್ನು ಶಿರ್ವ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಜೂನ್ 1ರಂದು ದೊರೆತ ಮಾಹಿತಿಯ ಮೇರೆಗೆ ಶಿರ್ವ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಮರಬದ ಅವರು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಅಪರಾಧ ಪರಿಶೀಲನಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿ, ಜಾನುವಾರಿನ ಮೇಲ್ದವಡೆ ಭಾಗ, ಎರಡು ಗೆರಸುಗಳು, ಮಾಂಸ ಹಾಗೂ ಹೊಟ್ಟೆಯ ಒಳಭಾಗಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 51/2026ರಡಿ ಕರ್ನಾಟಕ ಜಾನುವಾರು ವಧೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 4 ಮತ್ತು 12ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ವೇಳೆ ಜಾನುವಾರನ್ನು ವಧೆ ಮಾಡಿ ಮಾಂಸ ತೆಗೆದು, ಅವಶೇಷಗಳನ್ನು ಹೊಳೆಗೆ ಎಸೆದ ಆರೋಪದಡಿ ಶಿರ್ವ ಪದವಿನ ನಿವಾಸಿ ಅಶೋಕ (52) ಎಂಬಾತನನ್ನು ಜೂನ್ 5ರಂದು ಬಂಧಿಸಲಾಗಿದೆ. ಆರೋಪಿಯ ವಶದಲ್ಲಿದ್ದ ಜಾನುವಾರಿನ ಚರ್ಮ ಹಾಗೂ ಕೃತ್ಯಕ್ಕೆ ಬಳಸಿದ್ದ ಅಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ಹಾಗೂ ಕಾಪು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಅಝಮತ್ ಅಲಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುನಾಥ ಮರಬದ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್‌ನ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ದುಷ್ಕರ್ಮಿಗಳನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು.





