ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಪತ್ರಕರ್ತನೊಬ್ಬರ ರಾಷ್ಟ್ರೀಯತೆಯನ್ನು ಪ್ರಶ್ನಿಸುವ ಮೂಲಕ ಹೊಸ ಜನಾಂಗೀಯ ನಿಂದನೆಯ ವಿವಾದವನ್ನು ಹುಟ್ಟುಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಅಮೆರಿಕ ಅಧ್ಯಕ್ಷರ ಬಾಂಧವ್ಯದ ಕುರಿತು ಪ್ರಶ್ನೆ ಕೇಳಲು ಪತ್ರಕರ್ತ ಮುಂದಾದಾಗ, ಅವರನ್ನು ತಡೆದ ಟ್ರಂಪ್, “ನೀವು ಭಾರತದಿಂದ ಬಂದಿದ್ದೀರಾ? ನಾನು ನೀವು ಜರ್ಮನಿಯಿಂದ ಬಂದಿದ್ದೀರಿ ಎಂದುಕೊಂಡಿದ್ದೆ,” ಎಂದು ವ್ಯಂಗ್ಯವಾಗಿ ಕೇಳಿದ್ದಾರೆ. ಪತ್ರಕರ್ತ ತಾನು ಭಾರತದವನೆಂದು ಖಚಿತಪಡಿಸಿದ ನಂತರ, “ನಾನು ಕೇವಲ ತಮಾಷೆ ಮಾಡುತ್ತಿದ್ದೆ, ನೀವು ಸೆಂಟ್ರಲ್ ಕಾಸ್ಟಿಂಗ್‌ನವರಂತೆ (ಹಾಲಿವುಡ್ ಸಿನಿಮಾ ತಾರೆಯಂತೆ) ಕಾಣುತ್ತೀರಿ,” ಎಂದು ಟ್ರಂಪ್ ಹೇಳಿದ್ದಾರೆ.
ಬಳಿಕ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ “ಉತ್ತಮ ಸ್ನೇಹಿತ” ಎಂದು ಹೇಳಿದ್ದು, ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ನವದೆಹಲಿಯೊಂದಿಗಿನ ಸಂಭಾವ್ಯ ವ್ಯಾಪಾರ ಒಪ್ಪಂದದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಭಾರತದೊಂದಿಗಿನ ಆರ್ಥಿಕ ಸಂಬಂಧದಿಂದ ಅಮೆರಿಕವು ಈಗ ಗಣನೀಯವಾಗಿ ಲಾಭ ಪಡೆಯುತ್ತಿದೆ ಎಂದು ಹೇಳಿದ್ದಾರೆ.
“ವರ್ಷಗಳ ಕಾಲ ಭಾರತವು ಅಮೆರಿಕದ ಲಾಭ ಪಡೆದುಕೊಂಡಿತು. ಅವರು ನಮ್ಮ ಮೇಲೆ ಅಗಾಧವಾದ ಸುಂಕಗಳನ್ನು ವಿಧಿಸಿದರು, ಆದರೆ ನಮಗೆ ಏನನ್ನೂ ಪಾವತಿಸಲಿಲ್ಲ. ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದ್ದು, ನಾವು ಭಾರತದೊಂದಿಗೆ ಸಾಕಷ್ಟು ಹಣವನ್ನು ಗಳಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಒಂದು ಒಪ್ಪಂದಕ್ಕೆ ಬರಲಿದ್ದೇವೆ,” ಎಂದು ಟ್ರಂಪ್ ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಬಾಂಬ್, ಬೆದರಿಕೆಗಳಿಗೆ ಬಗ್ಗದ ಜ್ಞಾನದೀವಿಗೆ: ಬಡವರ ಪಾಲಿನ ಅಕ್ಷರ ಸಂತ ‘ಖಾನ್ ಸರ್’
ಭಾರತ ಸೇರಿದಂತೆ 60 ಆರ್ಥಿಕತೆಗಳ ಆಮದುಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 12.5 ರಷ್ಟು ಸುಂಕ ವಿಧಿಸುವ ಪ್ರಸ್ತಾಪವನ್ನು ಟ್ರಂಪ್ ಆಡಳಿತವು ಮುಂದಿಟ್ಟ ಮರುದಿನವೇ ಈ ಘಟನೆ ನಡೆದಿದೆ.
ಟ್ರಂಪ್ ಅವರ ಈ ಹೇಳಿಕೆಗೆ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಳಕೆದಾರರೊಬ್ಬರು, “ಅಮೆರಿಕನ್ನರು ಒಬ್ಬ ಜೋಕರ್ ಅನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರು ಇಂತಹ ಹೇಳಿಕೆಗಳನ್ನು ನೀಡುವುದು ಆಶ್ಚರ್ಯವೇನಲ್ಲ,” ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು ಇದನ್ನು “ಉನ್ನತ ಮಟ್ಟದ ಜನಾಂಗೀಯ ನಿಂದನೆ” ಎಂದು ಟೀಕಿಸಿದ್ದಾರೆ.





