ಶಿವಮೊಗ, ಕೆರೆಯಲ್ಲಿ ಕಾಲು ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ, ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಗೌಡನಕೆರೆಯಲ್ಲಿ ನಡೆದಿದೆ.ಆಯನೂರು – ಹಣಗೆರೆಕಟ್ಟೆ ರಸ್ತೆಯ ಹೊಸೂರು ಗ್ರಾಮದ ನಿವಾಸಿ ನಿಶಾಂತ್ (25) ನೀರುಪಾಲಾದ ಯುವಕ ಎಂದು ಗುರುತಿಸಲಾಗಿದೆ.
ಬೆಳಿಗ್ಗೆ ಸರಿಸುಮಾರು 6 ಗಂಟೆ ಸುಮಾರಿಗೆ ಗೌಡನಕೆರೆಗೆ ಯುವಕ ತೆರಳಿದ್ದು, 10 ಗಂಟೆಯಾದರೂ ಮನೆಗೆ ಹಿಂದಿರುಗಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕಾರಣದಿಂದ ಕುಟುಂಬದವರು ಕೆರೆ ಬಳಿ ಆಗಮಿಸಿ ಪರಿಶೀಲಿಸಿದ್ದಾರೆ. ಈ ವೇಳೆ ಯುವಕನ ಬೈಕ್ ಹಾಗೂ ಚಪ್ಪಲಿ ಮಾತ್ರ ಪತ್ತೆಯಾಗಿದೆ. ತಕ್ಷಣವೇ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ತಂಡ, ಬೋಟ್ ಮೂಲಕ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದೆ. ಸಂಜೆ 4. 30 ಗಂಟೆ ಸುಮಾರಿಗೆ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆ ಹಚ್ಚುವಲ್ಲಿ ಸಫಲವಾಗಿದೆ. ಈ ಕುರಿತಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
