ಶಿವಮೊಗ್ಗ, ಎಚ್ಐವಿ, ಏಡ್ಸ್ ಕಾಯಿಲೆ ಕುರಿತು ಯುವಕರು ಜಾಗೃತರಾಗಿ, ಸಮಾಜದಿಂದ ಏಡ್ಸ್ ನಿರ್ಮೂಲನೆ ಮಾಡುವ ಕಾರ್ಯ ಆಗಬೇಕಿದೆ ಎಂದು ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಧಿಕಾರಿಗಳಾದ ಡಾ. ಬಿ.ಪಿ. ನಾಗೇಶ್ ಅಭಿಪ್ರಾಯಪಟ್ಟರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಹಾಗೂ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ಎಸ್ಎಸ್ ಘಟಕಗಳ ಸಹಯೋಗದೊಂದಿಗೆ ಇಂದು ಹಮ್ಮಿಕೊಳ್ಳಲಾಗಿದ್ದ ಎಚ್ಐವಿ, ಏಡ್ಸ್ ಅರಿವಿನ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಚ್ಐವಿ ನಿಯಂತ್ರಣಕ್ಕಾಗಿ ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಹೆಚ್ಐವಿ ಸೋಂಕಿತರನ್ನು ಸಹಾನುಭೂತಿಯಿಂದ ನೋಡುವ ಕಾರ್ಯ ಸಮಾಜದಿಂದ ಆಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ. ಅವಿನಾಶ್ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಸಾಮಾಜಿಕ ಜಾಗೃತಿಯ ಅರಿವನ್ನು ಪಡೆದು ತಮ್ಮನ್ನು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ಶುಭಾ ಮರವಂತೆ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಾಗೃತಿ ಮಾಹಿತಿ ಕುರಿತು ಮಾತನಾಡಿದರು.
ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿಗಳಾದ ದೊಡ್ಡ ವೀರಪ್ಪ ಚಲವಾದಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಪ್ರಕಾಶ್ ಮರ್ಗನಹಳ್ಳಿ, ಡಾ. ಪರಶುರಾಮ್ ಎಂ., ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ಕುಂದನ್ ಬಸವರಾಜ್, ಡಾ. ಕೆ.ಎಸ್. ಸರಳ, ಇಲಾಖಾ ಅಧಿಕಾರಿಗಳಾದ ರವಿಕುಮಾರ್ ಎಸ್.ಟಿ., ರಾಜು ನರಸಯ್ಯ ಉಪಸ್ಥಿತರಿದ್ದರು.
ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರಾದ ಎನ್. ಮಂಗಳ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಚ್ಐವಿ ಏಡ್ಸ್ ಜಾಗೃತಿಯ ಬಿತ್ತಿ ಚಿತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.